ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವೃಕ್ಷಲಕ್ಷ ಆಂದೋಲನದವರು ವೈಜ್ಞಾನಿಕ ಕಾರಣಗಳನ್ನು ತೆರೆದಿಟ್ಟಿದ್ದಾರೆ. `ತಮ್ಮ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರ ಕೊಡಿ’ ಎಂದು ಅವರು ಮುಖ್ಯಮಂತ್ರಿ ಸೇರಿ ಅನೇಕರಿಗೆ ಪತ್ರ ಬರೆದಿದ್ದಾರೆ.
`ಕೇಣಿಯಲ್ಲಿ ಬಂದರು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಖಾಸಗಿ ಕಂಪನಿಗೆ ಒಪ್ಪಿಗೆ ಕೊಟ್ಟಿದೆ. ಈ ಸಮುದ್ರದಲ್ಲಿ ಭಾರೀ ಪ್ರಮಾಣದ ಬಂದರು ಮಾಡುವುದರಿಂದ 10 ಸಾವಿರಕ್ಕೂ ಅಧಿಕ ಮೀನುಗಾರರ ಬದುಕಿಗೆ ಸಂಚಕಾರ ಬರಲಿದೆ. ಈ ಹಿನ್ನಲೆ ಕಳೆದ ಒಂದು ವರ್ಷದಿಂದ ಮೀನುಗಾರರು ಜನಾಂದೋಲನ ನಡೆಸುತ್ತಿದ್ದಾರೆ. ಸಾರ್ವಜನಿಕ ಅಹವಾಲು ಸಭೆ, ಧರಣಿ, ಮೆರವಣಿಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಜನ ಈ ಯೋಜನೆಯನ್ನು ವಿರೋಧಿಸಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ, ಕಾನೂನುಗಳ ಭಾರೀ ಉಲ್ಲಂಘನೆ ಮಾಡಿ ಸರ್ಕಾರ ಬಂದರು ಯೋಜನೆ ಜಾರಿ ಮಾಡಿ ಏನು ಪ್ರಯೋಜನ?’ ಎಂದು ಅವರು ಪ್ರಶ್ನಿಸಿದ್ದಾರೆ.
`ಕೇಣಿ ಸಮುದ್ರ ತೀರದಲ್ಲಿ ಕರಾವಳಿ ಪರಿಸರ ನಿಯಂತ್ರಣ (ಸಿ ಆರ್ ಜಡ್) ಕಾಯಿದೆ ತೀವ್ರ ಭಂಗ ಆಗುವದನ್ನು ಜಿಲ್ಲಾ ಮತ್ತು ರಾಜ್ಯ ಸಿ ಆರ್ ಜಡ್ ಅಥಾರಿಟಿ ಎತ್ತಿ ಹೇಳುತ್ತಿಲ್ಲ. ಈ ಅಥಾರಿಟಿ ಮುಖ್ಯಸ್ಥರು ಕೇಣಿಗೆ ಬಂದು ಸ್ಥಳದಲ್ಲಿ ಪರಿಸರ ತಜ್ಞರ ಜೊತೆ ಪರಿಶೀಲನೆ ನಡೆಸುವ ಧೈರ್ಯ ತೋರಿಸುತ್ತಿಲ್ಲ. ಕೇಣಿ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮ ಪಂಚಾಯತಗಳು ಕೈಗೊಂಡ ಗ್ರಾಮ ಸಭೆಗಳ ನಿರ್ಣಯಗಳನ್ನು ಮಾನ್ಯ ಮಾಡಬೇಕಾದ ಜಿಲ್ಲಾ ಪಂಚಾಯತರಾಜ್ ಇಲಾಖೆ, ಜಿಲ್ಲಾಡಳಿತ, ರಾಜ್ಯ ಪಂಚಾಯತ ರಾಜ್ ಇಲಾಖೆ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿಗಳಿಗೆ ಈ ಜನಾಭಿಪ್ರಾಯ ತಿಳಿಸುವ ಕರ್ತವ್ಯ ನಿರ್ವಹಿಸಿದ ಹಾಗಿಲ್ಲ’ ಎಂದು ಸಂಘಟನೆಯವರು ಅಸಮಧಾನವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಾಸಕರು ಸಂಸದರು ವಿಧಾನಸಭೆ ಹಾಗೂ ಲೋಕ ಸಭೆಯಲ್ಲಿ ಅಂಕೋಲಾ ಮೀನುಗಾರರ ಪರವಾಗಿ ವಕಾಲತ್ತು ಮಾಡಬೇಕು. ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳು ಅಂಕೋಲಾ ಸಮುದ್ರ, ಸಮುದ್ರ ತೀರವನ್ನು ಮಾಲಿನ್ಯ ಮಾಡುವ ಬಂದರು ಯೋಜನಾ ಪ್ರದೇಶದಲ್ಲಿ ಸಭೆ ಮಾಡಲು ಬಿಡದಿರುವುದು ಏತಕೆ?’ ಎಂದು ಪ್ರಶ್ನಿಸಿದ್ದಾರೆ. `ನೌಕಾನೆಲೆ ಪಕ್ಕ ಖಾಸಗಿ ಬಂದರು ಕಂಪನಿ ಕಾಮಗಾರಿ ನಡೆಸಲು ರಕ್ಷಣ ಇಲಾಖೆ ಅನುಮತಿ ಇದೆಯೆ? ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನ ನೀಡಿದ್ದಾರೆಯೆ? ಎಂದು ಅವರು ಪ್ರಶ್ನಿಸಿದ್ದಾರೆ.
`ಅಂಕೋಲಾ ಕೇಣಿಯ ಮೀನುಗಾರರು ಮುಗ್ಧ ಜನತೆಯ ಒಗ್ಗಟ್ಟು, ಸಂಘಟನೆ, ನಿರಂತರ ಹೋರಾಟಕ್ಕೆ ಇಡೀ ಜಿಲ್ಲೆ ಜನತೆ ಬೆಲೆ ಕೊಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಗಟ್ಟಿ ಧ್ವನಿ ಎತ್ತುತ್ತಿಲ್ಲ’ ಎಂದು ವೃಕ್ಷಲಕ್ಷ ಆಂದೋಲನದವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಅಂಕೋಲಾ ಕರಾವಳಿಯ ಹಳ್ಳ, ಹೊಳೆ,ಗುಡ್ಡ, ಅಳಿವೆ ರಕ್ಷಣೆಗೆ ರಾಜ್ಯ ಜಾಗುಪ್ರದೇಶ ರಕ್ಷಣಾ ಪ್ರಾಧಿಕಾರ ಏಕೆ ಮುಂದಾಗಿಲ್ಲ. ರಾಜ್ಯ ಜೀವ ವೈವಿದ್ಯ ಮಂಡಳಿಯವರು ಕೇಣಿ ಬಂದರು ಪ್ರದೇಶಕ್ಕೆ ಏಕೆ ಬೇಟಿ ನೀಡಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನ ಫಿಶರೀಸ್ ಕಾಲೇಜು, ಧಾರವಾಡ ಕೃಷಿ ವಿಶ್ವವಿಧ್ಯಾಲಯ, ಬಾಗಲ್ಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿಧ್ಯಾಲಯ ಧಾರವಾಡದವರೆಲ್ಲರೂ ಸಮುದ್ರ ತೀರ ಅಧ್ಯಯನಕ್ಕೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಮಾನವ ಹಕ್ಕು ಆಯೋಗಗಳು ಅಂಕೋಲಾ ಕೇಣಿಗೆ ಬಂದು ಬಡ ಮೀನುಗಾರರ ಬದುಕುವ ಹಕ್ಕು ರಕ್ಷಣೆಗೆ ಬೆಂಬಲ ನೀಡಬೇಕು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸ್ವ ಪ್ರೇರಣೆಯಿಂದ ವಿಶೇಷ ತಂಡವನ್ನು ಕೇಣಿಗೆ ಕಳಿಸಿ ಮೀನುಗಾರರಿಗೆ ಕಾನೂನು ನೆರವು ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಆಶೀಸರ, ಪರಿಸರ ವಿಜ್ಞಾನಿಗಳಾದ ಟಿ ವಿ ರಾಮಚಂದ್ರ, ಸುಭಾಸ್ ಚಂದ್ರನ್, ಬಿ.ಎಂ ಕುಮಾರ ಸ್ವಾಮಿ ಬಾಲಚಂದ್ರ ಸಾಯಿಮನೆ, ವಿ ಎನ್ ನಾಯ್ಕ, ಮುಂತಾದವರು ಈ ವಿಷಯದ ಬಗ್ಗೆ ಗಮನ ಚೆಲ್ಲಿದ್ದಾರೆ.