ತುರ್ತು ಸನ್ನಿವೇಶದಲ್ಲಿ ಜನರ ನೆರವಿಗೆ ಬರಬೇಕಿದ್ದ ಕಾರವಾರದ ಕಿಮ್ಸ್ ಆಂಬುಲೆನ್ಸ್ ಕಾಸು ಕೊಡದೇ ಚಲಿಸುವುದಿಲ್ಲ. ನಿನ್ನೆಯೂ 4 ಸಾವಿರ ರೂ ಕರೆನ್ಸಿ ಕಂಡ ನಂತರವೇ ಆ ಆಂಬುಲೆನ್ಸ್ ಚಲಿಸಿದ್ದು, ಕಾಸು ಕೊಡುವವರೆಗೂ ಅಪಘಾತಕ್ಕೀಡಾದ ಗಾಯಾಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ!
ಸೋಮವಾರ ಕಾರವಾರದ ಕದ್ರಾ ಬಳಿ ಬಸ್ಸೊಂದು ಬೈಕಿಗೆ ಡಿಕ್ಕಿಯಾಯಿತು. ಅಣು ವಿದ್ಯುತ್ ಘಟಕದ ಸಿಬ್ಬಂದಿ ಸಾಗಿಸುವ ಬಸ್ಸು ಗುದ್ದಿದ ಪರಿಣಾಮ ರಮೇಶ ಸುಬ್ರಾಯ ಬಾಂದೇಕರ ಅವರು ಗಾಯಗೊಂಡರು. ತಕ್ಷಣ ಗಾಯಾಳುವನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಕಿಮ್ಸ್ ಆವರಣದಲ್ಲಿದ್ದ ಆಂಬುಲೆನ್ಸ ಕಾಸು ಕೊಡದೇ ಮುಂದೆ ಚಲಿಸಲಿಲ್ಲ. ರೋಗಿ ಸಂಬAಧಿಕರ ಬಳಿ ತುರ್ತಾಗಿ ಕೊಡಲು ಕಾಸು ಇರಲಿಲ್ಲ. ಹೀಗಾಗಿ ಗಾಯಾಳು ಸಮಸ್ಯೆ ಅನುಭವಿಸಿದರು.
ಕೊನೆಗೆ ಸಮಸ್ಯೆ ಅರಿತ ವ್ಯಕ್ತಿಯೊಬ್ಬರು ಖಾಸಗಿ ಖಾತೆಗೆ 4 ಸಾವಿರ ರೂ ಹಣ ಜಮಾ ಮಾಡಿದರು. ಅದಾದ ನಂತರ ಆ ಆಂಬುಲೆನ್ಸ ಮುಂದೆ ಸಾಗಿತು. ಮಲ್ಲಾಪುರದ ಸಾಮಾಜಿಕ ಕಾರ್ಯಕರ್ತ ವಿಕೇಶ ಬಾಂದೇಕರ ಈ ವಿಷಯವಾಗಿ ತೀವ್ರ ಅಸಮಾಧಾನವ್ಯಕ್ತಪಡಿಸಿದರು. `ಹಣ ಇದ್ದ ಕಾರಣ ಅದನ್ನು ಪಾವತಿಸಲಾಯಿತು. ಹಣ ಇಲ್ಲದವರು ಅಪಘಾತಕ್ಕೀಡಾದರೆ ಗತಿ ಏನು?’ ಎಂದವರು ಪ್ರಶ್ನಿಸಿದರು.