ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯಾಗಿ 550 ವರ್ಷ ಪೂರೈಸಿದ ಹಿನ್ನಲೆ ಪರ್ತಗಾಳಿಯಲ್ಲಿ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಈ ಹಿನ್ನಲೆ ನಾಡಿನ ಅನೇಕ ಕಡೆ ಕ್ಷೇತ್ರದ ರಥ ಸಂಚಾರ ನಡೆದಿದೆ.
ಅಕ್ಟೊಬರ್ 19ರಂದು ಬದ್ರಿಕಾಶ್ರಮದಿಂದ ಹೊರಟ ಈ ರಥ ಈಗಾಗಲೇ ಹಲವು ರಾಜ್ಯಗಳನ್ನು ಸಂಚರಿಸಿದೆ. ಜಗದ್ಗುರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಈ ರಥಯಾತ್ರೆಗೆ ಚಾಲನೆ ನೀಡಿದ್ದು, ಆರು ರಾಜ್ಯಗಳನ್ನು ಸುತ್ತಿ ಕರ್ನಾಟಕಕ್ಕೆ ಪ್ರವೇಶಿಸುತ್ತಿದೆ. ಈ ರಥವೂ ನವೆಂಬರ್ 4ರಂದು ದಾಂಡೇಲಿ ಪ್ರವೇಶಿಸಲಿದ್ದು, ಅಲ್ಲಿಂದ ಮುಂದೆ ಯಲ್ಲಾಪುರಕ್ಕೆ ಬರಲಿದೆ. ಸಂಜೆ 4.30ಕ್ಕೆ ಇಲ್ಲಿನ ಗಣ್ಯರು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಿದ್ದಾರೆ. ಅದಾದ ನಂತರ ರಥವೂ ದೇವಿ ದೇವಸ್ಥಾನ ತಲುಪಲಿದ್ದು, ಅಲ್ಲಿಂದ ವೆಂಕಟರಮಣ ಮಠದವರೆಗೆ ರಾಮ, ಲಕ್ಷ್ಮಣ, ಸೀತೆ, ಹನುಮಂತ ದೇವರ ಭವ್ಯ ಮೆರವಣಿಗೆ ನಡೆಯಲಿದೆ.
ಸಂಜೆ 5ರಿಂದ 6ಗಂಟೆಯವರೆಗೆ ಮೆರವಣಿಗೆ ಮೂಲಕ ಧಾರ್ಮಿಕ ಪ್ರಚಾರ ಕಾರ್ಯ ನಡೆಯಲಿದೆ. ನವೆಂಬರ್ 4ರ ರಾತ್ರಿ ವೆಂಕಟ್ರಮಣ ಮಠದ ಆವರದಲ್ಲಿಯೇ ರಥ ತಂಗಲಿದೆ. ಮರುದಿನ ಮುಂಜಾನೆ ರಥವೂ ಮುಂಡಗೋಡು ಭಾಗದಲ್ಲಿ ಸಂಚರಿಸಲಿದೆ. ನವೆಂಬರ್ 26ರಂದು ಈ ರಥ ಪರ್ತಗಾಳಿ ತಲುಪಲಿದೆ. ರಥ ಸಂಚರಿಸುವ ಕಡೆ ಎಲ್ಲವೂ ದೀಪೋತ್ಸವ, ಚಂಡೆ-ಗಾಯನ, ಪುಠಾಣಿಗಳಿಂದ ರಾಮನ ವೇಷ ಗಮನಸೆಳೆಯುತ್ತಿದೆ. ಭಕ್ತರಿಗೆ ಹೊರಕಾಣಿಕೆ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಲಕ್ಷ್ಮೀನರಸಿಂಹ ವೆಂಕಟ್ರಮಣ ಮಠದ ಅಧ್ಯಕ್ಷ ವಿನಾಯಕ ನೀಲಕಂಠ ಪೈ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.