ಶಿರಸಿಯ ಮುಸ್ಸಂಜೆ ಭಟ್ಟಅವರಿಗೆ ಗಿರಿಶ ಗಾಂವ್ಕರ್ (ಇಬ್ಬರ ಹೆಸರು ಬದಲಿಸಿದೆ) ಅವರು ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾರೆ. `ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋ ವೈರಲ್ ಮಾಡುವೆ’ ಎಂದು ಹೆದರಿಸಿದ್ದಾರೆ!
ಶಿರಸಿಯಲ್ಲಿ ಮುಸ್ಸಂಜೆ ಭಟ್ಟ ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಗಿರಿಶ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಮದುವೆ ಆಗುವಂತೆ ಕಾಡಿಸುತ್ತಿದ್ದಾರೆ. `ಮದುವೆ ಆಗಲು ಇಷ್ಟವಿಲ್ಲ’ ಎಂದರೂ ಗಿರಿಶ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಬಿಡುತ್ತಿಲ್ಲ.
ಗಿರಿಶ ಗಾಂವ್ಕರ್ ಅವರು ಮುಸ್ಸಂಜೆ ಭಟ್ಟ ಅವರನ್ನು ಭೇಟಿಯಾಗಲು ಪದೇ ಪದೇ ಬರುತ್ತಿದ್ದು, ಅವರು ಕೆಲಸ ಮಾಡುವ ಜಾಗಕ್ಕೂ ದಾಳಿಯಿಡುತ್ತಿದ್ದಾರೆ. ಅಲ್ಲಿಯೂ ಬಂದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲದರ ನಡುವೆ ಸೆಪ್ಟೆಂಬರ್ 13ರ ಮಧ್ಯಾಹ್ನ ಮುಸ್ಸಂಜೆ ಭಟ್ಟ ಅವರು ಶಿರಸಿ ಎಪಿಎಂಸಿ ಬಳಿಯ ಭಾಗೀರಥಿ ಟ್ರೇಡಿಂಗ್ ಕಂಪನಿ ಬಳಿ ಹೋಗುತ್ತಿದ್ದಾಗ ಗಿರಿಶ ಗಾಂವ್ಕರ್ ಅವರು ಅಡ್ಡಗಟ್ಟಿದರು. `ನನ್ನನ್ನು ನೀ ಮದುವೆ ಆಗಬೇಕು’ ಎಂದು ದಬಾಯಿಸಿದರು. ಅದನ್ನು ಮುಸ್ಸಂಜೆ ಭಟ್ಟ ಅವರು ನಿರಾಕರಿಸಿದ್ದು, `ನೀ ಬೇರೆಯವರನ್ನು ಮದುವೆ ಆದರೆ ನಿನ್ನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಮಾಡುವೆ’ ಎಂದು ಬೆದರಿಸಿದರು. `ನೀನು ತಲೆ ಎತ್ತಿ ಓಡಾಡದ ಹಾಗೇ ಮಾಡುವೆ. ನಿನ್ನನ್ನು ಜೀವಸಹಿತ ಉಳಿಯಲು ಬಿಡುವುದಿಲ್ಲ’ ಎಂದು ದಮ್ಕಿ ಹಾಕಿದರು.
ಈ ಎಲ್ಲಾ ವಿಷಯಗಳ ಬಗ್ಗೆ ಮುಸ್ಸಂಜೆ ಭಟ್ಟ ಅವರು ಅಕ್ಟೊಬರ್ 30ರಂದು ಪೊಲೀಸರ ಮೊರೆಹೋದರು. ಪೊಲೀಸರು ಈ ಪ್ರಕರಣ ವಿಚಾರಣೆ ನಡೆಸಿದ್ದು, ಅದಕ್ಕೆ ತೃಪ್ತರಾಗದ ಮುಸ್ಸಂಜೆ ಭಟ್ಟ ಅವರು ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಮದುವೆ ಆಗುವಂತೆ ಬೆದರಿಕೆ ಒಡ್ಡಿದ ಎಲ್ಲರ ವಿರುದ್ಧ ವಾರದ ಹಿಂದೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.