ಪ್ರತಿ ವರ್ಷದಂತೆ ಈ ವರ್ಷವೂ ಉತ್ತರ ಕನ್ನಡ ಜಿಲ್ಲೆಗೆ ಮಂಗನ ಕಾಯಿಲೆ ವಕ್ಕರಿಸಿದೆ. ಈವರೆಗೆ 9 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಆ ಪೈಕಿ ಮೂವರು ಈ ರೋಗದಿಂದ ಸಾವನಪ್ಪಿದ್ದಾರೆ.
`ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲಾ ರೀತಿಯಲ್ಲಿಯೂ ಕ್ರಮ ಜರುಗಿಸಬೇಕು’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. `ಕಾಯಿಲೆಯಿಂದ ರಕ್ಷಿಸಿಕೊಳ್ಳುವ ವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅಗತ್ಯವಿರುವುಷ್ಟು ಪ್ರಮಾಣದಲ್ಲಿ ಡೇಪಾ ತೈಲ ದಾಸ್ತಾನು ಮಾಡಿಕೊಳ್ಳಬೇಕು’ ಎಂದವರು ನಿರ್ದೇಶನ ನೀಡಿದ್ದಾರೆ.
ಶುಕ್ರವಾರ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆ ನಡೆಸಿದ ಅವರು ಗರ್ಭಿಣಿಯರ ಆರೈಕೆಯ ಬಗ್ಗೆ ವಿಚಾರಿಸಿದರು. `ಪ್ರಸವ ಪೂರ್ವದಲ್ಲಿ ಗರ್ಭಿಣಿಯರ ಆರೈಕೆ ಕುರಿತಂತೆ ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು. ತಾಯಿ ಕಾರ್ಡಿನ ಪ್ರಯೋಜನ ಮತ್ತು ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಗರ್ಭಿಣಿಯರಿಗೆ ವಿವರಿಸಬೇಕು. ನವಜಾತು ಶಿಶು ಮರಣ ತಪ್ಪಿಸಲು ಪ್ರಸವದ ನಂತರ ಶಿಶುವಿನ ಆರೈಕೆ ವಿಧಾನಗಳ ಕುರಿತು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು. `ನವೆಂಬರ್ 11ರಿಂದ ಡಿಸೆಂಬರ್ 9ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನದ ಸರ್ವೆ ಕಾರ್ಯವನ್ನು ನಡೆಸಬೇಕು’ ಎಂದು ಸೂಚಿಸಿದರು.