80 ಲಕ್ಷ ರೂ ಮೌಲ್ಯದ ಚಿನ್ನ 50 ಲಕ್ಷ ರೂಪಾಯಿಗೆ ಖರೀದಿಸುವ ಆಸೆಗೆ ಬಿದ್ದ ಹೊನ್ನಾವರದ ವೆಂಕಟೇಶ ಮಹಾಲೆ ಅವರಿಗೆ ಮೂರು ನಾಮ ಬಿದ್ದಿದೆ. ಪ್ರಜಾಪತಿ ಎಂಬಾತ ಮಾಡಿದ ಕಿತಾಪತಿಗೆ ಕಿರಾಣಿ ವ್ಯಾಪಾರಿ ಹೊಂಡಕ್ಕೆ ಬಿದ್ದಿದ್ದಾರೆ.
ಹೊನ್ನಾವರ ಗುಣವಂತೆಯ ಹಡುಕನಕೇರಿಯಲ್ಲಿ ವೆಂಕಟೇಶ ಗಣಪಯ್ಯ ಮಹಾಲೆ ಅವರು ವಾಸವಾಗಿದ್ದಾರೆ. ಗುಣವಂತೆಯಲ್ಲಿ ಅವರು ತಮ್ಮದೇ ಆದ ಶ್ರೀ ಮಹಾಲಸಾ ನಾರಾಯಣಿ ಪ್ರಾವಿಜನ್ ಸ್ಟೋರ್ಸ ಎಂಬ ಕಿರಾಣಿ ಅಂಗಡಿ ನಡೆಸುತ್ತಾರೆ. ವ್ಯವಹಾರಸ್ಥರಾಗಿರುವ ವೆಂಕಟೇಶ ಮಹಾಲೆ ಅವರು ಕಡಿಮೆ ಬೆಲೆಗೆ ಏನು ಸಿಕ್ಕರೂ ಬಿಡುವವರಲ್ಲ. ಇಂಥಹುದೇ ದುರಾಸೆಯಿಂದ ಅವರು ಇದೀಗ ಮೋಸ ಹೋಗಿದ್ದಾರೆ.
2025ರ ಮೇ ಮಾಸದಲ್ಲಿ ರಾಜಸ್ಥಾನದ ರಾಜು ಪ್ರಜಾಪತಿ ಎಂಬಾತರು ವೆಂಕಟೇಶ ಮಹಾಲೆ ಅವರ ಅಂಗಡಿಗೆ ಬಂದಿದ್ದರು. ಅನೇಕ ವಸ್ತುಗಳನ್ನು ಖರೀದಿಸಿ ಪ್ರಾಮಾಣಿಕ ವ್ಯವಹಾರ ನಡೆಸಿದ್ದರು. ಅದಾದ ನಂತರ ನಿತ್ಯವೂ ಆಗಮಿಸಿ ವಿವಿಧ ವಸ್ತು ಖರೀದಿಸುತ್ತಿದ್ದರು. ರಾಜು ಪ್ರಜಾಪತಿ ಅವರನ್ನು ಕಂಡರೆ ವೆಂಕಟೇಶ ಮಹಾಲೆ ಅವರಿಗೆ ಎಲ್ಲಿಲ್ಲದ ವಿಶ್ವಾಸಬೆಳೆಯಿತು. ಅವರು ಹೇಳಿದನ್ನೆಲ್ಲ ಕೇಳಲು ಶುರು ಮಾಡಿದರು.
ಹೀಗಿರುವಾಗ 20 ದಿನದ ಹಿಂದೆ ಕಿರಾಣಿ ಅಂಗಡಿಗೆ ಬಂದಿದ್ದ ರಾಜು ಪ್ರಜಾಪತಿ ಅವರು ವೆಂಕಟೇಶ ಮಹಾಲೆ ಅವರ ಕಿವಿಯಲ್ಲಿ ಸಣ್ಣದಾಗಿ ಊದಿದ್ದರು. `ತನ್ನ ಬಳಿ 750 ಗ್ರಾಂ ಬಂಗಾರ ಇದೆ. ತುಂಬಾ ಹಳೆಯ ಬಂಗಾರ ಅದಾಗಿದ್ದು, 80 ಲಕ್ಷ ರೂಪಾಯಿವರೆಗೆ ಬೆಲೆಯಿದೆ’ ಎಂದು ಪ್ರಜಾಪತಿ ಹೇಳಿದರು. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರಿಕೆ ಆಗುತ್ತಿರುವುದನ್ನು ವೆಂಕಟೇಶ ಮಹಾಲೆ ಅವರು ಗಮನಿಸಿದ್ದರು. ಆ ಎಲ್ಲಾ ಬಂಗಾರವನ್ನು ತಾವೇ ಖರೀದಿಸುವ ಯೋಜನೆಗೆ ಬಿದ್ದರು.
ರಾಜು ಪ್ರಜಾಪತಿ ಹಾಗೂ ವೆಂಕಟೇಶ ಮಹಾಲೆ ಅವರ ನಡುವಿನ ಮಾತುಕಥೆಯಲ್ಲಿ 50 ಲಕ್ಷ ರೂಪಾಯಿಗೆ ಹೊಂದಾಣಿಕೆಯಾಯಿತು. ಅಲ್ಲಿ-ಇಲ್ಲಿ ಕೂಡಿಟ್ಟ ಎಲ್ಲಾ ಹಣವನ್ನು ವೆಂಕಟೇಶ ಮಹಾಲೆ ಅವರು ಒಟ್ಟಾಗಿ ಸೇರಿಸಿದರು. ಅಕ್ಟೊಬರ್ 30ರಂದು ಹಣಕ್ಕೆ ಸಿದ್ಧತೆ ಮಾಡಿಕೊಂಡು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಅಕ್ಟೊಬರ್ 31ರಂದು ಬಂಗಾರ ತರುವಂತೆ ಸೂಚನೆ ಕೊಟ್ಟರು.
ಅದರ ಪ್ರಕಾರ, ರಾಜು ಪ್ರಜಾಪತಿ ಅವರು ನಿಗದಿತ ಸಮಯಕ್ಕೆ ಮತ್ತೊಬ್ಬ ವ್ಯಕ್ತಿ ಜೊತೆ ಬಂದರು. ಹಳೆಯ ಬಂಗಾರ ಕೊಟ್ಟು 50 ಲಕ್ಷ ರೂ ಹಣಪಡೆದರು. ಅದಾದ ನಂತರ ವೆಂಕಟೇಶ ಮಹಾಲೆ ಅವರು ಖುಷಿಯಾಗಿ ಅಕ್ಕಸಾಲಿಗನ ಬಳಿ ಓಡಿದರು. ಬಂಗಾರ ತಪಾಸಣೆ ನಡೆಸಿದಾಗ ಅದು ನಕಲಿ ಎಂದು ಗೊತ್ತಾಯಿತು. ತಕ್ಷಣ ರಾಜು ಪ್ರಜಾಪತಿ ಅವರಿಗೆ ಫೋನ್ ಮಾಡಿದರು. ಆದರೆ, ಪ್ರಜಾಪತಿ ಫೋನ್ ಸ್ವಿಚ್ ಆಫ್ ಬರುತ್ತಿತ್ತು!
ತಮಗಾದ ಮೋಸ, ಅನ್ಯಾಯದ ಬಗ್ಗೆ ವೆಂಕಟೇಶ ಮಹಾಲೆ ಅವರು ಮಂಕಿ ಪೊಲೀಸ್ ಠಾಣೆಗೆ ಹೋಗಿ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಮೋಸ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
`ಅತಿ ಆಸೆ ಗತಿಗೇಡು’