ಕುಮಟಾ ಆಡಳಿತ ಸೌಧದಕ್ಕೆ ನಾಲ್ಕು ಜೇನುಗೂಡು ಕಟ್ಟಿದ್ದು, ಇಲ್ಲಿನ ದುಂಬಿಗಳು ಅನೇಕರಿಗೆ ಕಚ್ಚಿವೆ. ಅದಾಗಿಯೂ ಜೇನುಗೂಡು ಸ್ಥಳಾಂತರಿಸುವ ಕೆಲಸ ನಡೆದಿಲ್ಲ.
ಜೇನುಗೂಡಿನ ಅಪಾಯದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಗಮನಕ್ಕೆ ತಂದಿದ್ದರು. ಜೇನುಗೂಡು ತೆರವಿಗೆ ಕ್ರಮ ಜರುಗಿಸುವಂತೆ ಅವರು ಸಹಾಯಕ ಆಯುಕ್ತ ಶ್ರವಣಕುಮಾರ ಅವರಿಗೆ ಮನವಿ ಮಾಡಿದ್ದರು. ಆದರೆ, ಅಪಾಯದ ಬಗ್ಗೆ ಅಧಿಕೃತ ಪತ್ರ ನೀಡಿ 12 ದಿನ ಕಳೆದರೂ ಕ್ರಮವಾಗಿಲ್ಲ.
`ಆಧಾರ್ ತಿದ್ದುಪಡಿ, ಪಹಣಿ ಪತ್ರಿಕೆ ಪಡೆಯುವಿಕೆ, ಕೋರ್ಟು-ಕಚೇರಿ ಕೆಲಸಕ್ಕಾಗಿ ನಿತ್ಯ ನೂರಾರು ಜನ ಆಡಳಿತ ಸೌಧಕ್ಕೆ ಆಗಮಿಸುತ್ತಾರೆ. ಹೀಗೆ ಬರುವ ಮಕ್ಕಳು, ಮಹಿಳೆಯರಿಗೆ ಸಹ ಜೇನು ಹುಳುಗಳ ದಾಳಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಜೇನುಗೂಡು ತೆರವು ನಡೆದಿಲ್ಲ’ ಎಂದು ಆಗ್ನೇಲ್ ರೋಡಿಗ್ರಸ್ ಅಸಮಧಾನವ್ಯಕ್ತಪಡಿಸಿದರು.
`ಶಾಸಕರ ಕಚೇರಿ, ತಹಶೀಲ್ದಾರ್ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಸೇರಿ ಹಲವು ಕಚೇರಿಗಳು ಈ ಕಟ್ಟಡದಲ್ಲಿವೆ. ಅಲ್ಲಿ ಬರುವವರಿಗೆ ಜೇನು ಕಚ್ಚಿ ಅಪಾಯ ಆದರೆ ಯಾರು ಹೊಣೆ?’ ಎಂದವರು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಗಮನಸೆಳೆಯುವುದಾಗಿ ಅವರು ಹೇಳಿದ್ದಾರೆ.