ಯಲ್ಲಾಪುರ ಪಟ್ಟಣದಲ್ಲಿ ಹೊಸದಾಗಿ ಶುರುವಾದ ಔಷಧಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಜೊತೆಗೆ ಸಿಹಿ ತಿನಿಸು ಮಾರಾಟ ಮಳಿಗೆಯಲ್ಲಿಯೂ ಕಳ್ಳರು ಕಾಸು ದೋಚಿದ್ದಾರೆ.
ಯಲ್ಲಾಪುರ ತಾಲೂಕಾ ಪಂಚಾಯತ ಸಮೀಪದ ಅಂಗಡಿಗಳಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದೆ. ಸೀತಾಲಕ್ಷ್ಮೀ ಮೆಡಿಕಲ್ಸ್ ಹಾಗೂ ಅದರ ಎದುರಿಗಿರುವ ಶಂಕರ್ ಸ್ವೀಟ್ಸ್ ಮಳಿಗೆಯಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.
ಈ ಎರಡು ಕಡೆ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ. ಔಷಧಿ ಅಂಗಡಿಯಲ್ಲಿ ಒಳ್ಳೆಯ ವ್ಯಾಪಾರ ನಡೆಯುತ್ತಿರುವುದನ್ನು ಅರಿತು ಅಲ್ಲಿದ್ದ 40 ಸಾವಿರ ರೂ ಹಣ ಎಗರಿಸಿದ್ದಾರೆ. ಬೇಕರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಸು ಸಿಗದ ಕಾರಣ ಕೆಲ ಸಾಮಗ್ರಿ ಅಪಹರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಂಗಡಿ ಬಳಿ ಬಂದ ಗ್ರಾಹಕರು ಮಾಲಕರಿಗೆ ಫೋನ್ ಮಾಡಿದ್ದಾರೆ. ಮಾಲಕರು ಬಂದು ಬಾಗಿಲು ತೆರೆಯುವ ಪ್ರಯತ್ನ ಮಾಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.