ಪಾರ್ವತಿ ನಾಯ್ಕ ಅವರ ಮನೆಯಲ್ಲಿ ಬಂಗಾರ ಕದ್ದಿದ್ದ ಹರ್ಷವರ್ಧನ ಅವರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಮತ್ತೆ ಬಂಧಿಸಿದ್ದಾರೆ.
ಸಿದ್ದಾಪುರದ ಹುಸೂರು ಗ್ರಾಮದ ಕುಂಬಾರಕುಳಿಯಲ್ಲಿ ಪಾರ್ವತಿ ತಿಮ್ಮ ನಾಯ್ಕ ಅವರು ವಾಸವಾಗಿದ್ದಾರೆ. 2017ರ ಸೆಪ್ಟೆಂಬರ್ 9ರಂದು ಅವರ ಮನೆಗೆ ನುಗ್ಗಿದ್ದ ಹಾಸನದ ಹರ್ಷವರ್ಧನ ಅವರು ಬಂಗಾರದ ಸರ, ಉಂಗುರ, ಕಿವಿಯೋಲೆ ಜೊತೆ 5 ಸಾವಿರ ರೂ ಹಣ ಕದ್ದು ಪರಾರಿಯಾಗಿದ್ದರು. ಅದಾದ ನಂತರ ಹರ್ಷವರ್ಧನ ಅವರು ಬೆಂಗಳೂರಿಗೆ ಹೋಗಿ ಜೀವನ ನಡೆಸುತ್ತಿದ್ದು, ಪ್ರಕರಣದ ಬೆನ್ನತ್ತಿದ ಪೊಲೀಸರು ಅವರನ್ನು ಬಂಧಿಸಿದ್ದರು. ಅದಾದ ನಂತರ ಜಾಮೀನುಪಡೆದು ಜೈಲಿನಿಂದ ಹೊರಬಂದಿದ್ದ ಹರ್ಷವರ್ಧನ ಅವರು ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಕಳೆದ ಮೂರು ವರ್ಷದ ಅವಧಿಯಲ್ಲಿ ನ್ಯಾಯಾಲಯವೂ ಹರ್ಷವರ್ಧನ ಅವರಿಗೆ 10ಕ್ಕೂ ಅಧಿಕ ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರೂ, ಹರ್ಷವರ್ಧನ ನ್ಯಾಯಾಲಯದ ಸೂಚನೆಗೆ ಕಿಮ್ಮತ್ತು ಕೊಟ್ಟಿರಲಿಲ್ಲ. ಪೊಲೀಸರ ಕೈಗೂ ಸಿಗುತ್ತಿರಲಿಲ್ಲ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹರ್ಷವರ್ಧನ ಅಡಗಿರುವುದು ಪೊಲೀಸರಿಗೆ ಗೊತ್ತಾಯಿತು. ಹೀಗಾಗಿ ವಿಶೇಷ ತಂಡ ರಚಿಸಿದ ಉತ್ತರ ಕನ್ನಡ ಪೊಲೀಸರು ಮಾರುವೇಷದಲ್ಲಿ ಅಲ್ಲಿ ಹೋಗಿ ಹುಡುಕಾಟ ನಡೆಸಿದರು. ಅಲ್ಲಿಯೇ ಹರ್ಷವರ್ಧನ ಅವರನ್ನು ಬಂಧಿಸಿ ಜಿಲ್ಲೆಗೆ ಕರೆತಂದರು. ಸಿದ್ದಾಪುರ ಪಿಐ ಜೆಬಿ ತಿಪ್ಪೆಸ್ವಾಮಿ, ಪಿಸೈ ಶಾಂತಿನಾಥ ಪಾಸಾನೆ, ಗೀತಾ ಶಿರ್ಶಿಕರ್, ಪೊಲೀಸ್ ಸಿಬ್ಬಂದಿ ಚೇತನಕುಮಾರ ಹಲಗೇರಿ, ರಮೇಶ ಕುಡಲ್, ಭರತಕುಮಾರ ಶ್ರಮಿಸಿದ್ದಾರೆ.