ಸರಿಯಾದ ರಸ್ತೆಯಲ್ಲಿ ಸಾಗಬೇಕಿದ್ದ ಲಾರಿಯೊಂದು ಬಾವಿಯ ಕಡೆ ಮುಖ ಮಾಡಿದೆ. ಅದೇ ಮಾರ್ಗದಲ್ಲಿ ಸಾಗಿದ ಪರಿಣಾಮ ಆ ಲಾರಿ ಬಾವಿಗೆ ಬಿದ್ದಿದೆ!
ಕುಂದಾಪುರದಿoದ ಶಿಗ್ಗಾವಿಗೆ ಅಕ್ಕಿ ತುಂಬಿಕೊoಡು ಹೋಗುತ್ತಿದ್ದ ಲಾರಿ ಭಟ್ಕಳದ ವೆಂಕಟಾಪುರದಲ್ಲಿ ಅಪಘಾತಕ್ಕೀಡಾಗಿದೆ. ಹಗಲಿನ ವೇಳೆಯಲ್ಲಿಯೇ ಲಾರಿ ಬಾವಿಗೆ ಬಿದ್ದಿದ್ದು, ಲಾರಿಯ ಮುಂದಿನ ಭಾಗ ಜಖಂ ಆಗಿದೆ.
ಮಂಗಳವಾರ ಈ ಲಾರಿ ಕುಂದಾಪುರದಿoದ ಹೊರಟಿತ್ತು. ಸಿದ್ದರಾಜು ಘೋರ್ಪಡರ ಅವರು ಲಾರಿ ಓಡಿಸುತ್ತಿದ್ದರು. ಬುಧವಾರ ಮಧ್ಯಾಹ್ನದ ವೇಳೆ ಲಾರಿ ಭಟ್ಕಳ ತಲುಪಿದ್ದು, ಅದಾದ ನಂತರ ವೆಂಕಟಾಪುರದಲ್ಲಿರುವ ಬಾವಿ ಬಳಿ ಬಂದಿದೆ. ಲಾರಿಯೂ ಚಾಲಕನ ನಿಯಂತ್ರಣ ತಪ್ಪಿ ಬಾವಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ.
ಅದಾದ ನಂತರ ಆ ಲಾರಿ ಬಾವಿಯೊಳಗೆ ಹಾರಿದೆ. ಲಾರಿಯ ನಡುವಿನ ಭಾಗ ಬಾವಿಯಲ್ಲಿ ಸಿಕ್ಕಿಬಿದ್ದಿದ್ದು, ಜಖಂ ಆದ ಮುಂದಿನ ಭಾಗ ಬಾವಿಯ ಇನ್ನೊಂದು ಕಡೆಯಿಂದ ಹೊರ ಬಿದ್ದಿದೆ. ಕ್ರೇನ್ ಮೂಲಕ ಆ ಲಾರಿಯನ್ನು ಹೊರಗೆ ತರುವ ಚಿಂತನೆ ನಡೆದಿದೆ. ಈ ಅಪಘಾತದಿಂದ ಲಾರಿಯಲ್ಲಿದ್ದ ಆಹಾರ ಸಾಮಗ್ರಿ ನಾಶವಾಗಿಲ್ಲ. ಈ ಅಪಘಾತದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.