ಯಾಣ ಪ್ರವಾಸಕ್ಕೆ ಹೊರಟಿದ್ದ ಎಂ ಬಿ ಬಿ ಎಸ್ ವಿದ್ಯಾರ್ಥಿಗಳ ಬೈಕು ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಪರಿಣಾಮ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಸೇರಿಕೊಂಡು ಶನಿವಾರ ಯಾಣಕ್ಕೆ ಹೋಗಲು ನಿರ್ಧರಿಸಿದ್ದರು. ಅದರ ಪ್ರಕಾರ ಒಂದಷ್ಟು ಹುಡುಗರು ಬೈಕಿನಲ್ಲಿ ಹುಬ್ಬಳ್ಳಿ ಕಡೆಯಿಂದ ಹೊರಟಿದ್ದರು. ಬಿಜಾಪುರದ ಸಿಂದಗಿಯ ರಾಜೀವ ಭೀಮಾಶಂಕರ್ ಚೌದರಿ ಅವರು ಓಡಿಸುತ್ತಿದ್ದ ಬೈಕಿನಲ್ಲಿ ಯಾದಗಿರಿಯ ವರ್ಧನ ವೆಂಕಟೇಶ ಶೆಟ್ಟಿ ಅವರು ಕುಳಿತಿದ್ದರು. ಇನ್ನಿತರ ಬೈಕುಗಳ ಜೊತೆ ರಾಜೀವ ಅವರು ಓಡಿಸುತ್ತಿದ್ದ ಬೈಕು ಸಹ ವೇಗವಾಗಿತ್ತು.
ಶನಿವಾರ ಮಧ್ಯಾಹ್ನದ ವೇಳೆ ಈ ಬೈಕು ಯಲ್ಲಾಪುರ ಪ್ರವೇಶಿಸಿತು. ಕಣ್ಣಿಗೇರಿ ಗ್ರಾಮದ ಕಣ್ಣಿಗೇರಿ ಗ್ರಾಮದ ಎಚ್ ಕೆ ಜಿ ಎನ್ ಸಿಮೆಂಟ್ ಪಾಕ್ಟರಿ ಬಳಿ ರಾಜೀವ ಚೌದರಿ ಅವರ ಬೈಕು ನಿಯಂತ್ರಣ ತಪ್ಪಿತು. ಪರಿಣಾಮ ಬೈಕು ಎಡ ಮಗ್ಗುಲಾಗಿ ಬಿದ್ದಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ವರ್ಧನ ಶೆಟ್ಟಿ (19) ಅವರ ತಲೆ ಹೆದ್ದಾರಿಗೆ ಬಡಿಯಿತು. ಆ ತೀವೃತೆಗೆ ವರ್ಧನ ಶೆಟ್ಟಿ ಅವರು ಅಲ್ಲಿಯೇ ಕೊನೆಯುಸಿರೆಳೆದರು.
ಅಪಘಾತದ ವಿಷಯ ಕೇಳಿ ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ಸ್ಥಳಕ್ಕೆ ದೌಡಾಯಿಸಿದರು. ಪಿಎಸೈ ಸಿದ್ದಪ್ಪ ಗುಡಿ ಅವರು ಅಪಘಾತದ ಸ್ಥಳಕ್ಕೆ ಹೋದರು. ಗಾಯಗೊಂಡು ಬಿದ್ದಿದ್ದ ರಾಜೀವ ಚೌದರಿ ಅವರನ್ನು ಆಸ್ಪತ್ರೆಗೆ ಸೇರಿಸಿದರು. ಅದಾದ ನಂತರ ಅವರ ಜೊತೆಯಿದ್ದ ಮತ್ತೊಬ್ಬ ಎಂ ಬಿ ಬಿ ಎಸ್ ವಿದ್ಯಾರ್ಥಿ ಸೃಜನ ರಮೇಶ ಶಟ್ಟರ್ ಅವರು ನೀಡಿದ ಹೇಳಿಕೆಪಡೆದರು. ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದರಿಂದ ರಾಜೀವ ಚೌದರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.
`ನಿಧಾನವಾಗಿ ವಾಹನ ಓಡಿಸಿ’