`ಒಳಗೆ ಪ್ರವೇಶವಿಲ್ಲ’ ಎಂದು ಬೋರ್ಡು ಹಾಕಿದ ಹೊಟೇಲ್ ಅಡುಗೆ ಮನೆಗೆ ಅಧಿಕಾರಿಗಳು ಪ್ರವೇಶಿಸಿದ್ದಾರೆ. ಅಲ್ಲಿನ ಅಶುಚಿತ್ವ ನೋಡಿ ಕಿಡಿಕಾರಿದ್ದಾರೆ.
ಶಿರಸಿ ತಹಶೀಲ್ದಾರ್ ಪುಟ್ಟರಾಜ ಗೌಡ ಅವರು ಬುಧವಾರ ನಗರದ ವಿವಿಧ ಹೊಟೇಲುಗಳಿಗೆ ದಿಢೀರ್ ಭೇಟಿ ನೀಡಿದರು. ಗೃಹ ಬಳಕೆಗೆ ಲಭ್ಯವಿರುವ ಸಿಲೆಂಡರುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ಅವರು ಪತ್ತೆ ಮಾಡಿದರು. ನಿಯಮಗಳ ಪ್ರಕಾರ ತಿಂಡಿ-ತಿನಿಸುಗಳ ಬೆಲೆ ನಮೂದಿಸದ ಬಗ್ಗೆ ಆಕ್ಷೇಪಿಸಿದರು. ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡದ ಹೊಟೇಲ್ ಮಾಲಕರಿಗೆ ಬಿಸಿ ಮುಟ್ಟಿಸಿದರು. ಪರವಾನಿಗೆಪಡೆಯದೇ ಹೊಟೇಲ್ ನಡೆಸುತ್ತಿದ್ದವರಿಗೆ ಕಾನೂನು ಪಾಠ ಮಾಡಿದರು.
ಪರವಾನಿಗೆ ಪಡೆದವರು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದು ಒತ್ತಿ ಹೇಳಿದರು. ದುಬಾರಿ ಬೆಲೆಯಲ್ಲಿ ತಿಂಡಿ-ತಿನಿಸು ಮಾರುತ್ತಿರುವುದನ್ನು ಪ್ರಶ್ನಿಸಿದರು. ಹೊಟೇಲ್ ಸಿಬ್ಬಂದಿಯನ್ನು ಮಾತನಾಡಿಸಿ ಅವರ ವೇತನದ ಬಗ್ಗೆ ತಿಳಿದುಕೊಂಡರು. ಎಲ್ಲಾ ಕಾನೂನು ಪಾಲನೆಗೆ ಹೊಟೇಲ್ ಮಾಲಕರು ಗಡುವು ಕೇಳಿದ್ದು, ದಂಡ ವಿಧಿಸಿ ಬಿಸಿ ಮುಟ್ಟಿಸಿದರು. `ನಿಯಮ ಅನುಸರಿಸದೇ ಇದ್ದರೆ ಹೊಟೇಲ್ ಬಾಗಿಲು ಮುಚ್ಚಿಸುವೆ’ ಎಂದು ತಹಶೀಲ್ದಾರ್ ಪುಟ್ಟರಾಜ ಗೌಡ ಅವರು ಎಚ್ಚರಿಸಿದರು.
ಆಹಾರ ಇಲಾಖೆ ಅಧಿಕಾರಿಗಳು ಸಹ ತಹಶೀಲ್ದಾರ್ ಅವರ ಜೊತೆಗಿದ್ದರು. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಹೊಟೇಲ್ ಮೇಲೆ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದರು.