ಮಕ್ಕಳು ಕ್ರಿಕೆಟ್ ಆಡುತ್ತಿರುವಾಗ ಗಲಾಟೆ ಸಹಿಸದ ರಿಜಾಯ ಶೇಖ್ ಅವರು ಮಕ್ಕಳನ್ನು ಸುಮ್ಮನಿರಸಲು ಹೋಗಿ ಅಲ್ಲಿದ್ದ ಕ್ರಿಕೆಟ್ ಬ್ಯಾಟಿನಿಂದ ಪೆಟ್ಟು ತಿಂದಿದ್ದಾರೆ. ಸರಾಯಿ ಕುಡಿದು ಮಕ್ಕಳ ಬಳಿ ಸುಳಿದಾಡಿದ ಕಾರಣ ರಿಯಾಜ್ ಶೇಖ್ ಅವರಿಗೆ ಅಬೀದ್ ಸಯ್ಯದ್ ಎಂಬಾತರು ತಲೆಗೆ ಹೊಡೆದಿದ್ದಾರೆ.
ಸಿದ್ದಾಪುರದ ನೆಜ್ಜೂರಿನಲ್ಲಿ ರಿಯಾಜ್ ಶೇಖ್ (43) ಅವರು ಹಮಾಲಿ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 25ರ ಸಂಜೆ ಅವರು ಊರಿನ ಆಟದ ಮೈದಾನಕ್ಕೆ ಹೋಗಿದ್ದರು. ಅಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದು, ಅದನ್ನು ನೋಡುತ್ತ ನಿಂತಿದ್ದರು. ಈ ವೇಳೆ ಕೆಲ ಮಕ್ಕಳು ಅಲ್ಲಿ ಗಲಾಟೆ ಮಾಡುತ್ತಿದ್ದರು.
ಆಗ, ರಿಯಾಜ್ ಶೇಖ್ ಅವರು ಗಲಾಟೆ ಮಾಡುತ್ತಿದ್ದ ಮಕ್ಕಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. `ಗಲಾಟೆ ಮಾಡದೇ ಕ್ರಿಕೆಟ್ ಆಡಿ’ ಎಂದವರು ಹೇಳಿದರು. ಆದರೆ, ಈ ವೇಳೆ ರಿಯಾಜ್ ಶೇಖ್ ಅವರು ಮದ್ಯಪಾನ ಮಾಡಿದ್ದು, ಮದ್ಯಪಾನ ಮಾಡಿ ಮಕ್ಕಳ ಹತ್ತಿರ ಹೋಗಿದನ್ನು ಅದೇ ಊರಿನ ಅಬೀದ್ ಸಯ್ಯದ್ ಅವರು ಸಹಿಸಲಿಲ್ಲ.
ರಿಯಾಜ್ ಶೇಖ್ ಅವರ ವಿರುದ್ಧ ಸಿಟ್ಟಾದ ಅಬೀದ್ ಸಯ್ಯದ್ ಅವರು ಮಕ್ಕಳ ಬಳಿಯಿದ್ದ ಬ್ಯಾಟ್ ಕಸಿದುಕೊಂಡರು. `ಕುಡಿದು ಬಂದು ಮಕ್ಕಳ ಬಳಿ ಹೋಗುವೆಯಾ?’ ಎಂದು ದಬಾಯಿಸಿದರು. `ನೀ ಸರಾಯಿ ಕುಡಿದು ಮಕ್ಕಳಿಗೆ ಬುದ್ದಿ ಹೇಳಬೇಡ’ ಎಂದು ಬೈದು ಆ ಬ್ಯಾಟಿನಿಂದ ತಲೆಗೆ ಹೊಡೆದರು. ಅದಾದ ನಂತರ ಮೈಮೇಲೆಯೂ ಬಾರಿಸಿದರು. ಇದರಿಂದ ನೊಂದ ರಿಯಾಜ್ ಶೇಖ್ ಅವರು ಪೊಲೀಸರಿಗೆ ದೂರಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು.