ಅರಬ್ಬಿ ಸಮುದ್ರದ ಅಲೆಗೆ ಸಿಲುಕಿ ಸಹೋದರರು ಸಾವನಪ್ಪಿದ್ದಾರೆ. ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ಅಪಾಯಕ್ಕೆ ಸಿಲುಕಿದ್ದು, ಕೊನೆಗೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ಹೊನ್ನಾವರದ ಮಂಕಿ ಬಳಿಯ ದೇವರಗದ್ದೆಯಲ್ಲಿ ನಾರಾಯಣ ಖಾರ್ವಿ ಅವರು ವಾಸವಾಗಿದ್ದಾರೆ. ಅವರ ಮಕ್ಕಳಾದ ಸುಜನ ಖಾರ್ವಿ (15) ಹಾಗೂ ಮದನ್ ಖಾರ್ವಿ (17) ಅವರು ಗುರುವಾರ ಸಂಜೆ ಸಮುದ್ರಕ್ಕೆ ಹೋಗಿದ್ದರು. ನಿತ್ಯದ ರೂಢಿಯಂತೆ ಅವರು ಅಲ್ಲಿ ಕಬ್ಬಡ್ಡಿ ಆಟ ಆಡಿದ್ದರು. ಅದಾದ ನಂತರ ಮಂಕಿ ಮಡಿ ಸಮುದ್ರ ದಡೆಯಿಂದ ಮೀನು ಹಿಡಿಯುವುದಕ್ಕಾಗಿ ಹೊರಟರು. 100ಮೀ ಸಾಗುವಷ್ಟರಲ್ಲಿ ದೊಡ್ಡ ಅಲೆಯೊಂದು ಬಂದಿತು.
ಆ ಅಲೆಯ ರಭಸಕ್ಕೆ ಅವರಿದ್ದ ಪಾತಿದೋಣಿ ಮುಳುಗಿತು. ಈ ವೇಳೆ ಸುಜನ ಖಾರ್ವಿ ಅವರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಿಸಲು ಹೋದ ಮದನ್ ಖಾರ್ವಿ ಸಹ ನೀರು ಪಾಲಾದರು. ಪಾತಿದೋಣಿ ಸಹ ಆ ವೇಳೆ ಕಣ್ಮರೆಯಾಯಿತು. ನೀರಿನಲ್ಲಿ ಮುಳುಗಿದವರು ಮೇಲೆ ಬರಲಾರದೇ ಸಾವನಪ್ಪಿದರು. ಸಾಕಷ್ಟು ಹುಡುಕಾಟ ನಡೆಸಿದ ನಂತರ ರಾತ್ರಿ ವೇಳೆ ಅವರ ಶವ ಸಿಕ್ಕಿತು.
ಸೂರಜ ಜನ್ನಾ ಖಾರ್ವಿ ಅವರು ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ಮಂಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು. ಸಾವನಪ್ಪಿದ ಸಹೋದರರ ಮತ್ತೊಬ್ಬ ಸಹೋದರ ಅಂಗವೈಕಲ್ಯದಿoದ ಬಳಲುತ್ತಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.