ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ನೆಲ್ಲಿಕೇರಿಯಲ್ಲಿರುವ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿನ ಕ್ಯಾಂಟೀನಿನಲ್ಲಿ ಬನ್ಸು-ಬಾಜಿ ಸೇವಿಸಿದ್ದಾರೆ.
ಕಾಲೇಜಿನಲ್ಲಿ ಶನಿವಾರ ನೂತನವಾಗಿ ಕ್ಯಾಂಟೀನ್ ಶುರು ಮಾಡಲಾಗಿದ್ದು, ಅದನ್ನು ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ಅದಾದ ನಂತರ ಅಲ್ಲಿ ತಯಾರಿಸಿದ ತಿಂಡಿಗಳನ್ನು ಗಮನಿಸಿ ಬನ್ಸು-ಬಾಜಿ ಆರ್ಡರ್ ಮಾಡಿದರು. ಇದಕ್ಕೂ ಮುನ್ನ ದಿನಕರ ಶೆಟ್ಟಿ ಮಕ್ಕಳಿಗೆ ತಿನಿಸುಗಳನ್ನು ಕೊಟ್ಟರು.
`1800 ವಿದ್ಯಾರ್ಥಿಗಳಿರುವ ಕಾಲೇಜಿಗೆ ಕ್ಯಾಂಟೀನ್ ಅಗತ್ಯವಿರುವ ಬಗ್ಗೆ ಪ್ರಾಚಾರ್ಯರು ಹೇಳಿದ್ದರು. ದೂರ ದೂರ ಪ್ರದೇಶದಿಂದ ಮಕ್ಕಳು ಇಲ್ಲಿ ಬರುತ್ತಿದ್ದು, ಅವರಿಗೆ ಈ ಕ್ಯಾಂಟೀನ್ ಅನುಕೂಲ ಆಗಲಿದೆ’ ಎಂದು ದಿನಕರ ಶೆಟ್ಟಿ ಅವರು ಹೇಳಿದರು. `ಕೃಷಿ ಇಲಾಖೆ ಕಟ್ಟಡ ಕಾಲಿಯಿರುವುದನ್ನು ಗಮನಿಸಿ ಅಲ್ಲಿ ಕ್ಯಾಂಟೀನ್ ಶುರು ಮಾಡಲಾಗಿದೆ. ಹಸಿದ ಹೊಟ್ಟೆಯಲ್ಲಿ ಕಲಿಕೆ ಸಾಧ್ಯವಿಲ್ಲ ಎಂದು ಅರಿತು ಉಪಹಾರ ವ್ಯವಸ್ಥೆ ಶುರು ಮಾಡಲಾಗಿದ್ದು, ಗುಣಮಟ್ಟದ ತಿಂಡಿ-ತಿನಿಸುಗಳು ಇಲ್ಲಿ ಸಿಗಬೇಕು’ ಎಂದವರು ತಾಕೀತು ಮಾಡಿದರು.
ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ, ಸಮಿತಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ಇತರರು ಶಾಸಕರ ಜೊತೆ ತಿಂಡಿ ಸೇವಿಸಿದರು.