ಮುಸ್ಲಿಂ ಧರ್ಮ ಗುರು ಎಂದು ಪರಿಚಯಿಸಿಕೊಂಡ ಮಹ್ಮದ್ ರಿಜ್ವಾನ್ ಅವರು ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿ ಲಾಭಕೊಡಿಸುವುದಾಗಿ ಹೇಳಿ ಅತೀಖ ಗಬ್ಬಾರ್ ಅವರಿಂದ 5.70 ಲಕ್ಷ ರೂ ವಸೂಲಿ ಮಾಡಿದ್ದಾರೆ.
ಶಿರಸಿಯ ಅತೀಖ ಅಹ್ಮದ ಅಬ್ದುಲ ಗಪಾರ ಅವರು ವಿವಿಧ ವ್ಯವಹಾರ ಮಾಡಿಕೊಂಡಿದ್ದು, ತಮ್ಮ ವ್ಯಾಪಾರದ ಉದ್ದೇಶಕ್ಕಾಗಿ ಅವರು ಒಮ್ಮೆ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿನ ಕಾನಾಪುರದಲ್ಲಿ ಅವರಿಗೆ ಮಹ್ಮದ್ ರಿಜ್ವಾನ್ ಅವರು ಪರಿಚಿತರಾದರು. ಮಹ್ಮದ್ ರಿಜ್ಚಾನ್ ಅವರು ತಮ್ಮನ್ನು ಮುಸ್ಲಿಂ ಧರ್ಮ ಗುರು ಎಂದು ಪರಿಚಯಿಸಿಕೊಂಡರು. ಜೊತೆಗೆ ಗಿಡ ಮೂಲಿಕೆ ಔಷಧಿ ಹಾಗೂ ಸುಗಂಧ ದೃವ್ಯ ವ್ಯಾಪಾರವನ್ನು ಮಾಡುವುದಾಗಿ ಹೇಳಿಕೊಂಡರು. ಈ ವೇಳೆ ಅವರಿಬ್ಬರ ನಡುವೆ ಮೊಬೈಲ್ ಸಂಖ್ಯೆಯ ವಿನಿಮಯ ನಡೆಯಿತು.
ಅದಾದ ನಂತರ ಅತೀಖ ಅಹ್ಮದ್ ಅವರು ಶಿರಸಿಗೆ ಮರಳಿದ್ದು, 2025ರ ಜನವರಿಯಲ್ಲಿ ಮಹ್ಮದ್ ರಿಜ್ವಾನ್ ಅವರಿಂದ ಫೋನ್ ಬಂದಿತು. `ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ. 6 ಲಕ್ಷ ರೂ ಹೂಡಿಕೆ ಮಾಡಿ’ ಎಂದು ಮಹ್ಮದ್ ರಿಜ್ವಾನ್ ಅವರು ಹೇಳಿದರು. `ತನ್ನಲ್ಲಿ ಹಣ ಇಲ್ಲ’ ಎಂದು ಅತೀಖ ಗಪಾರ್ ಅವರು ತಿಳಿಸಿದಾಗ `ಹಂತ ಹಂತವಾಗಿ ಹೂಡಿಕೆ ಮಾಡಿ’ ಎಂಬ ಸಲಹೆ ಕೊಟ್ಟರು. `ತಾನು ಎಲ್ಲಾ ಮಾಹಿತಿ ತಿಳಿಸುವೆ’ ಎಂಬ ಭರವಸೆ ನೀಡಿದರು. ಧರ್ಮ ಗುರು ಹೇಳಿದ ಮಾತಿಗೆ ಅತೀಖ ಗಪಾರ್ ಅವರು ಇಲ್ಲ ಹೇಳಲಿಲ್ಲ. ಮಹ್ಮದ್ ರಿಜ್ವಾನ್ ಅವರು ಸೂಚಿಸಿದ ಪ್ರಕಾರ ಶಹನವಾಜ್ ಹುಸೇನ್ ಎಂಬಾತರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದರು. ಹಂತ ಹಂತವಾಗಿ 5.70 ಲಕ್ಷ ರೂ ಹಣ ಕೊಟ್ಟರು.
ಆದರೆ, ಅತೀಖ ಅಹ್ಮದ್ ಅವರಿಗೆ ಕ್ರಿಪ್ಟೋ ಕರೆನ್ಸಿ ಮಾತ್ರ ಸಿಗಲಿಲ್ಲ. ಪ್ರಶ್ನಿಸಿದಾಗ `ಗಲ್ಪ ರಾಷ್ಟçದಲ್ಲಿ ಯುದ್ಧದ ಸನ್ನಿವೇಶವಿದೆ. ಹೀಗಾಗಿ 3-4 ತಿಂಗಳು ಕಾಯಬೇಕು’ ಎಂದು ಮಹ್ಮದ್ ರಿಜ್ಚಾನ್ ಹೇಳಿದರು. ನಾಲ್ಕು ತಿಂಗಳ ನಂತರ ಫೋನ್ ಮಾಡಿದಾಗ `ತಾನೂ ಊರಿನಲ್ಲಿಲ್ಲ’ ಎಂದರು. ಸೆಪ್ಟೆಂಬರ್ ಅವಧಿಯಲ್ಲಿ ಮತ್ತೆ ಫೋನ್ ಮಾಡಿ ಹಣ ಕೇಳಿದಾಗ `ಇಲ್ಲಿಂದ ಜನರನ್ನು ಕಳುಹಿಸಿ ನಿನ್ನ ಕಥೆ ಮುಗಿಸುವೆ’ ಎಂದು ಬೆದರಿಕೆ ಒಡ್ಡಿದರು. ಹಣಣ ಪಡೆದಿದ್ದ ಖಾತೆಯವನಿಗೆ ಫೋನ್ ಮಾಡಿದರೂ ಪ್ರಯೋಜನ ಆಗಲಿಲ್ಲ.