ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಸೇರಿ ಸತೀಶ್ ನಾಯ್ಕ ಅವರ ಕನಸಿನ ಯೋಜನೆಗೆ ಕಲ್ಲು ಹೊಡೆದಿದ್ದಾರೆ. ಶಿಕ್ಷಣ ಸಂಸ್ಥೆ ನಿರ್ಮಿಸಬೇಕು ಎಂದು ಸತೀಶ ನಾಯ್ಕ ಅವರು ಖರೀದಿಸಿದ್ದ ಜಾಗದ ವಿಷಯವಾಗಿ ಆ ಮೂವರು ತೊಂದರೆ ಕೊಡುತ್ತಿದ್ದಾರೆ.
ಕಾರವಾರದ ಬಾಡದ ಬಳಿಯಿರುವ ಹನವಿವಾಡದಲ್ಲಿ ಸತೀಶ ಮಹಾಬಲೇಶ್ವರ ನಾಯ್ಕ ಅವರು ವಾಸವಾಗಿದ್ದಾರೆ. ಕಾಮದೇನು ಬಿಸಿಎ ಕಾಲೇಜಿನಲ್ಲಿ ಅವರು ಪ್ರಾಚಾರ್ಯರಾಗಿದ್ದಾರೆ. `ತಾನೂ ಒಂದು ವಿದ್ಯಾಸಂಸ್ಥೆ ಕಟ್ಟಬೇಕು’ ಎಂಬುದು ಸತೀಶ ನಾಯ್ಕ ಅವರ ಕನಸು. ಇದಕ್ಕಾಗಿ ಅವರು 13 ವರ್ಷದ ಹಿಂದೆಯೇ 5 ಎಕರೆ ಭೂಮಿ ಖರೀದಿಸಿದ್ದಾರೆ.
ಅಂಕೋಲಾದ ಸಕಲಬೇಣದಲ್ಲಿದ್ದ ಸಂತೋಷ ರೇವಣಕರ್ ಅವರ ಭೂಮಿಪಡೆದಿರುವ ಸತೀಶ ನಾಯ್ಕ ಅವರ ವಿರುದ್ಧ ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಅವರು ಅಸಮಧಾನಿತರಾಗಿದ್ದಾರೆ. `ಖರೀದಿಸಿದ ಭೂಮಿ ಜೊತೆ ಪಕ್ಕದಲ್ಲಿರುವ ತಮ್ಮ ಭೂಮಿಗೂ ಸತೀಶ ನಾಯ್ಕ ಅವರು ಬೇಲಿ ನಿರ್ಮಿಸಿದ್ದಾರೆ’ ಎಂಬುದು ಆ ಮೂವರ ಅಳಲು. ಹೀಗಾಗಿ `ಸರ್ವೇ ಸರಿಯಾಗಿಲ್ಲ’ ಎಂದು ಈಶ್ವರ ನಾಯ್ಕ, ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ತಕರಾರು ಸಲ್ಲಿಸುತ್ತಿದ್ದಾರೆ. ಆದರೆ, ಸತೀಶ ನಾಯ್ಕ ಅವರು ಈ ಮಾತು ನಂಬಿಲ್ಲ.
ಸತೀಶ ನಾಯ್ಕ ಅವರು ತಾವು ಖರೀದಿಸಿದ ಭೂಮಿ ಸುತ್ತಲು ಕಪೌಂಡ್ ನಿರ್ಮಿಸಿದ್ದಾರೆ. ಎರಡು ಕಡೆ ಚೀರೆ ಕಲ್ಲು ಹಾಗೂ ಒಂದು ಕಡೆ ಕಬ್ಬಿಣದ ಕಪೌಂಡ್ ನಿರ್ಮಿಸಿ ತಮ್ಮ ಜಾಗವನ್ನು ಭದ್ರಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ್ಸಾದ ಈಶ್ವರ ನಾಯ್ಕ ಸುರೇಶ ನಾಯ್ಕ ಹಾಗೂ ಗೋವಿಂದ ನಾಯ್ಕ ಅವರು ತಮ್ಮ ಜಾಗಕ್ಕೂ ಸತೀಶ ನಾಯ್ಕ ಅವರು ಕಪೌಂಡ್ ನಿರ್ಮಿಸಿದ ಬಗ್ಗೆ ಆಕ್ಷೇಪಿಸಿದ್ದು, ಆ ಕಪೌಂಡ್ ಒಡೆದಿದ್ದಾರೆ.
ನವೆಂಬರ್ 29ರಂದು ಕಪೌಂಡ್ ಒಡೆದಿದ್ದು ಸತೀಶ ನಾಯ್ಕ ಅವರಿಗೆ ನಂತರ ಗೊತ್ತಾಗಿದೆ. ಕಪೌಂಡ್ ಒಡೆದ ಮೂವರ ವಿರುದ್ಧ ಸತೀಶ ನಾಯ್ಕ ಅವರು ಪೊಲೀಸ್ ದೂರು ಸಲ್ಲಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.