ಕೇಂದ್ರ ನವೋದಯ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗೆ ಶಿಕ್ಷಕರಾಗಿರುವ ಅವರ ಅಪ್ಪನೇ ಕಾಫಿ ಚೀಟಿ ಕೊಟ್ಟಿದ್ದಾರೆ. ಪರೀಕ್ಷೆ ಪಾಸ್ ಆಗಲು ಅಸಮರ್ಥನಾಗಿದ್ದ ಮಗನಿಗೆ ಉತ್ತರ ಹೇಳಿಕೊಟ್ಟು ಪಾಸ್ ಮಾಡಿಸುವ ಸಾಹಸ ಮಾಡಿ ಸಿಕ್ಕಿಬಿದ್ದಿದ್ದಾರೆ!
ಹಳಿಯಾಳ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ನವೋದಯ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಕ ಚರ್ಚಿಲ್ ಸಂತಾನ್ ದಾಲ್ಮೆಟ್ ಅವರನ್ನು ಪರೀಕ್ಷೆ ಜವಾಬ್ದಾರಿಯಿಂದ ದೂರವಿರಿಸಲಾಗಿತ್ತು. ತಮ್ಮ ಮಗ ದಡ್ಡನಾಗಿದ್ದರೂ ಆತನನ್ನು ನವೋದಯಕ್ಕೆ ಸೇರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚಿಲ್ ಅವರು ನಿರ್ಧರಿಸಿದ್ದರು. ಹೀಗಾಗಿ ಅಕ್ರಮವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ ಅವರು ಅಲ್ಲಿನ ಸೂಪರ್‌ವೈಸರನ್ನು ಬುಟ್ಟಿಗೆ ಹಾಕಿಕೊಂಡರು.
ಅವರ ಜೊತೆ ಕೈಜೋಡಿಸಿ ತನ್ನ ಮಗನಿಗೆ ಉತ್ತರಗಳನ್ನು ಹೇಳಿಕೊಡಲು ಶುರು ಮಾಡಿದರು. ಕರ್ತವ್ಯದಲ್ಲಿರದ ಚರ್ಚಿಲ್ ಪರೀಕ್ಷಾ ಕೇಂದ್ರದೊಳಗೆ ಬಂದ ಬಗ್ಗೆ ಮಕ್ಕಳು ಪ್ರಶ್ನಿಸಿದರು. ಶಿಕ್ಷಕ ಚರ್ಚಿಲ್‌ನ ಈ ವರ್ತನೆಯಿಂದ ಇತರ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಅವರಿಗೆ ಪಾಲಕರು ದೂರು ಸಲ್ಲಿಸಿದರು.