ಮದ್ಯದ ನಶೆಯಲ್ಲಿದ್ದ ಮೂವರು ಗೋಕರ್ಣಕ್ಕೆ ಬಂದಿದ್ದ ವಿದೇಶಿಗನ ಮೇಲೆ ದಾಳಿ ಮಾಡಿದ್ದಾರೆ. ಆ ದಾಳಿಗೆ ಚಾರ್ಲಸ್ ಮಾರ್ಟಿನ್ ವೈಟ್ ತತ್ತರಿಸಿದ್ದು, ಅವರ ಮುಖದ ಆಕಾರವೇ ಬದಲಾಗಿದೆ.
ಅಮೇರಿಕಾದ ಚಾರ್ಲಸ್ ಮಾರ್ಟಿನ್ ವೈಟ್ ಅವರು ಗೋಕರ್ಣ ರುದ್ರಪಾದ ಬಳಿಯ ನಾಗೇಶ್ ಹೋಂ ಸ್ಟೇಯಲ್ಲಿ ವಾಸವಾಗಿದ್ದರು. ಡಿಸೆಂಬರ್ 20ರಂದು ಲಘುವಾದ ಸಂಗೀತ ಕೇಳುತ್ತ ಅವರು ನಿದ್ರಿಸುತ್ತಿದ್ದರು. ಆ ವೇಳೆ ಅವರ ಕೋಣೆಯ ಬಾಗಿಲು ಬಡಿದ ಸದ್ದು ಕೇಳಿದ್ದು ಪಾಂಡು, ಸತೀಶ, ಸಂಜಯ ಎಂಬಾತರು ಮ್ಯೂಸಿಕ್ ಬಂದ್ ಮಾಡುವಂತೆ ಸೂಚಿಸಿದರು. `ಏನಾಯಿತು?’ ಎಂದು ಚಾರ್ಲಸ್ ಕೇಳುವುದರೊಳಗೆ ಅವರು ದಾಳಿ ಶುರು ಮಾಡಿದರು.
ಆ ಮೂವರಲ್ಲಿ ಇಬ್ಬರು ಅಲ್ಲೇ ಪಕ್ಕದ ಝಯಾ ಕಫೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದು, ಸಂಜಯ ಗೋಕರ್ಣ ಅವರು ಹೊಡೆದಾಟಕ್ಕೆ ಕೈ ಜೋಡಿಸಿದ್ದರು. ಕುಡಿದ ಮತ್ತಿನಲ್ಲಿದ್ದ ಆ ಮೂವರು ಚಾರ್ಲಿಸ್ ಅವರ ಮುಖಕ್ಕೆ ಗುದ್ದಿದರು. ಗಾಜಿನ ಬಾಟಲಿಯಿಂದ ತಲೆಗೆ ಹೊಡೆದರು. ಚಾಕುವಿನಿಂದ ಚುಚ್ಚುವ ಪ್ರಯತ್ನ ಮಾಡಿದರು. ಗಾಯಗೊಂಡ ಚಾರ್ಲಿಸ್ ಅವರು ನಂತರ ಗೋಕರ್ಣ, ಅಂಕೋಲಾ ಆಸ್ಪತ್ರೆಗೆ ದಾಖಲಾದರು. ಅದಾದ ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಸೇರಿದರು.
ಚಾರ್ಲಿಸ್ ಅವರಿಗೆ ಹಲ್ಲು ಮುರಿದಿರುವುದು, ಮೂಗು ಡೊಂಕಾಗಿರುವುದು ವೈದ್ಯರ ಗಮನಕ್ಕೆ ಬಂದಿತು. ಎಲ್ಲವೂ ಮೊದಲಿನಂತೆ ಆಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕು ಎಂದು ವೈದ್ಯರು ಹೇಳಿದರು. ಈ ನಡುವೆ ಹೊಡೆದಾಟ ಮಾಡಿದ ಮೂವರು ಚಾರ್ಲಿಸ್ ಅವರಿಗೆ ಹುಚ್ಚನ ಪಟ್ಟ ಕಟ್ಟಿದ್ದರು. ಈ ಎಲ್ಲಾ ವಿಷಯ ಅರಿತ ಚಾರ್ಲಿಸ್ ಗೋಕರ್ಣ ಪೊಲೀಸರಿಗೆ ದೂರಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.