ರಾಜ್ಯದ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬೆ ಜಾತ್ರೆಗೆ ದಿನಾಂಕ ನಿಗಧಿಯಾಗಿದೆ. ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದೆ.
ಶಿರಸಿ ಜಾತ್ರೆಗೆ ತನ್ನದೇ ಆದ ಹಿನ್ನಲೆಯಿದೆ. ಅತ್ಯಂತ ಸಾಂಪ್ರದಾಯಕವಾದ ಆಚರಣೆ ಜಾತ್ರೆಯ ಗಮನಸೆಳೆಯುತ್ತದೆ. ಹೀಗಾಗಿ ದೇಶ-ವಿದೇಶಗಳಿಂದ ಭಕ್ತರು ಈ ಜಾತ್ರೆಗೆ ಬರುತ್ತಾರೆ. ನಂಬಿ ಬಂದ ಭಕ್ತರಿಗೆ ಸಕಲ ರೀತಿಯಲ್ಲಿಯೂ ದೇವಿ ಒಳ್ಳೆಯದನ್ನು ಮಾಡುತ್ತದೆ ಎಂಬ ನಂಬಿಕೆಯಿದೆ.
ನಿತ್ಯ ಸಾವಿರಾರು ಸಂಖ್ಯೆಯ ಜನ ಶಿರಸಿಗೆ ಬರುತ್ತಾರೆ. ಬಹುತೇಕರು ದೇವಿ ಆಲಯಕ್ಕೆ ಭೇಟಿ ನೀಡಿ ಪವಿತ್ರ ಸನ್ನಿಧಾನದ ಮಹಿಮೆಯನ್ನು ಅನುಭವಿಸುತ್ತಾರೆ. ಪುರಾತನ ವಿನ್ಯಾಸಗಳಿಂದ ಅಲಂಕೃತವಾದ ದೇವಾಲಯವನ್ನು ಕಣ್ತುಂಬಿಕೊAಡ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ಶಿರಸಿ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದು ಬಣ್ಣಿಸಲಾಗುತ್ತದೆ. ಅತ್ಯಂತ ಪ್ರಸಿದ್ಧ ಜಾತ್ರೆ ಇದಾಗಿದ್ದು, ಜಾತ್ರೆ ಪೂರ್ವಭಾವಿಯಾಗಿ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅದರಂತೆ ಭಾನುವಾರ ಮಾರಿಕಾಂಬಾ ದೇಗುಲದ ಸಭಾ ಮಂಟಪದಲ್ಲಿ ಈ ಸಭೆ ನಡೆದಿದ್ದು, ಈ ಸಭೆಯಲ್ಲಿ ಜಾತ್ರೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಜಾತ್ರಾ ಮೂಹೂರ್ತದಿಂದ ಹಿಡಿದು ದೇವಿ ಮರು ಪ್ರತಿಷ್ಠೆಯವರೆಗೆ ಸಭೆಯಲ್ಲಿ ವಿವರಿಸಲಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿಯೇ ದೇಗುಲ ಆಡಳಿತ ಮಂಡಳಿಯವರು ಫೆಬ್ರವರಿ 24ರಿಂದ ಮಾರ್ಚ 4ರವರೆಗೆ ಜಾತ್ರೆ ನಡೆಸುವ ಬಗ್ಗೆ ಘೋಷಿಸಿದ್ದಾರೆ.