ಪೊಲೀಸ್ ಸಿಬ್ಬಂದಿ ಉದಯ ನಾಯ್ಕ ಹಾಗೂ ಬಸವರಾಜ ಡಿಕೆ ಅವರ ಮೇಲೆ ಹಲ್ಲೆ ಮಾಡಿದ ಪ್ರಶಾಂತ ಪಾಠಣಕರ್ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಪ್ರಶ್ನಿಸಿ ಪ್ರಶಾಂತ ಪಾಠಣಕರ್ ಅವರು ಮೇಲ್ಮನವಿ ಸಲ್ಲಿಸಿದ್ದು, ಮೇಲಿನ ನ್ಯಾಯಾಲಯವೂ ತಪ್ಪು ಮಾಡಿದವನಿಗೆ ಸೂಕ್ತ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
2021ರಲ್ಲಿ ಕೊರೊನಾ ಹಿನ್ನಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿತ್ತು. ಸೋಂಕು ಹರಡುವುದನ್ನು ತಡೆಯಲು ಕಠಿಣ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ, ಯಲ್ಲಾಪುರದ ಶಾರದಾಗಲ್ಲಿಯ ಕೋರ್ಟ ಕ್ರಾಸಿನ ಬಳಿ ವಾಸಿಸುವ ಪ್ರಶಾಂತ ನಾರಾಯಣ ಪಾಠಣಕರ್ ಅವರು ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಚೈನಿಸ್ ಫಾಸ್ಟ್ಪುಡ್ & ಗೋಬಿ ಕಾರ್ನರ್ ಎಂಬ ಮಳಿಗೆ ನಡೆಸುವ ಅವರು ಕೊರೊನಾ ಅವಧಿಯಲ್ಲಿಯೂ ತಮ್ಮ ಮಳಿಗೆ ತೆರೆದಿದ್ದರು. ಅಲ್ಲಿ ಬರುವ ಗ್ರಾಹಕರಿಗೆ ತಿನಿಸುಗಳ ಜೊತೆ ಕೊರೊನಾ ಸೋಂಕು ಅಂಟಿಸಿ ಕಳುಹಿಸುವ ಪ್ರಯತ್ನ ನಡೆಸಿದ್ದರು.
Advertisement. Scroll to continue reading.
ಇದನ್ನು ಅರಿತ ಪೊಲೀಸ್ ಸಿಬ್ಬಂದಿ ಉದಯ ಆನಂದ ನಾಯ್ಕ ಅವರು ತಮ್ಮ ಠಾಣಾ ಸಿಬ್ಬಂದಿ ಬಸವರಾಜ ಡಿಕೆ ಅವರ ಜೊತೆ ಆ ಅಂಗಡಿ ಬಳಿ ಹೋಗಿದ್ದರು. ಪ್ರಶಾಂತ ಪಾಠಣಕರ್ ಅವರಿಗೆ ಕೊರೊನಾ ಮುನ್ನಚ್ಚರಿಕೆಯ ಪಾಠ ಮಾಡಿದ್ದರು. `ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಪಾಸ್ಟಪುಡ್ ಮಾರಾಟ ನಡೆಸುವುದು ತಪ್ಪು’ ಎಂದು ವಿವರಿಸಿದರು. ಆದರೆ, ಪ್ರಶಾಂತ ಪಾಠಣಕರ್ ಅವರು ಇದನ್ನು ಒಪ್ಪಿರಲಿಲ್ಲ. ಪೊಲೀಸರ ಬಳಿ ಎದುರು ಮಾತನಾಡಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರಶಾಂತ ಪಾಠಣಕರ್ ನಡುವೆ ವಾಗ್ವಾದ ನಡೆದಿದ್ದು, ಯುನಿಪಾರಂ ಧರಿಸಿದ್ದ ಪೊಲೀಸರ ಮೇಲೆ ಪ್ರಶಾಂತ ಪಾಠಣಕರ್ ಅವರು ಕೈ ಮಾಡಿದ್ದರು.
Advertisement. Scroll to continue reading.
Advertisement. Scroll to continue reading.
ಪೊಲೀಸ್ ಸಿಬ್ಬಂದಿ ಉದಯ ನಾಯ್ಕ ಅವರನ್ನು ಪ್ರಶಾಂತ ಪಾಠಣಕರ್ ಅವರು ನೆಲಕ್ಕೆ ದೂಡಿದ್ದರು. ಬಸವರಾಜ ಡಿಕೆ ಅವರ ಕೊರಳಿಗೆ ಕೈ ಹಾಕಿ ಕಾಲರ್ ಹಿಡಿದು ಎಳೆದಾಡಿದ್ದರು. ಅದಾದ ನಂತರ ಪ್ರಶಾಂತ ಪಾಠಣಕರ್ ಅವರು ತಮ್ಮ ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದರು. ಈ ಎಲ್ಲಾ ವಿಷಯದ ಬಗ್ಗೆ ಉದಯ ನಾಯ್ಕ ಅವರು ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಆಗಿನ ಪಿಐ ಸುರೇಶ ಎಳ್ಳೂರು ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಯಲ್ಲಾಪುರ ಜೆಎಂಎಫ್‌ಸಿ ನ್ಯಾಯಾಲಯವೂ ಪ್ರಶಾಂತ ಪಾಠಣಕರ ಅವರಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಸಹಿಸದ ಪ್ರಶಾಂತ ಪಾಠಣಕರ್ ಅವರು ಈ ಆದೇಶದ ವಿರುದ್ಧ ಮೇಲ್ಮನವಿ ಹಾಕಿದ್ದರು.
ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೇಲ್ಮನವಿ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲ ರಾಜೇಶ ಎಂ ಮಳಗಿಕರ್ ಅವರು ಕೊರೊನಾ ಅವಧಿಯ ಪರಿಸ್ಥಿತಿ ಹಾಗೂ ಆ ವೇಳೆ ಕೊರೊನಾ ವಾರಿಯರ್ಸ ಆಗಿ ಕರ್ತವ್ಯದಲ್ಲಿದ್ದ ಪೊಲೀಸರು ಅನುಭವಿಸಿದ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶ ಕಿರಣ ಕಿಣಿ ಅವರಿಗೆ ವಿವರಿಸಿದರು. `ಸರ್ಕಾರದ ನಿಯಮ ಉಲ್ಲಂಘಿಸಿದಲ್ಲದೇ, ಆ ಬಗ್ಗೆ ತಿಳುವಳಿಕೆ ಮೂಡಿಸಲು ಆಗಮಿಸಿದ ಸರ್ಕಾರಿ ನೌಕರರ ಮೇಲೆ ಕೈ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಕೆಳ ನ್ಯಾಯಾಲಯದಲ್ಲಿ ಆರೋಪ ಸಾಭೀತಾಗಿರುವುದನ್ನು ಗಮನಿಸಿದರು. ಆ ತೀರ್ಫನ್ನು ಮರುಪರಿಶೀಲನೆಗೆ ಒಳಪಡಿಸಿ ಪೊಲೀಸರ ಮೇಲೆ ಕೈ ಮಾಡಿದ್ದ ಪ್ರಶಾಂತ ಪಾಠಣಕರ್ ಅವರಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆಗೆ ಆದೇಶಿಸಿದರು.