ಅಂಕೋಲಾದ ಚಂದ್ರಹಾಸ ನಾಯಕ ಅವರ ಮೇಲೆ ರಮೇಶ ನಾಯಕ ಹಾಗೂ ರಾಜು ನಾಯಕ ಅವರು ಕೈ ಮಾಡಿದ್ದಾರೆ. ಅವರಿಬ್ಬರು ಸೇರಿ ಚಂದ್ರಹಾಸ ನಾಯಕ ಅವರನ್ನು ನೆಲಕ್ಕೆ ದೂಡಿ ನೋವು ಮಾಡಿದ್ದಾರೆ.
ಅಂಕೋಲಾ ಬೇಲಿಕೇರೆಯ ಚಂದ್ರಹಾಸ ಕೃಷ್ಣ ನಾಯಕ ಅವರು ತಮ್ಮ ಒಡೆತನದಲ್ಲಿರುವ ಕಟ್ಟಡದ ಬಗ್ಗೆ ರಮೇಶ ಕೃಷ್ಣ ನಾಯಕ ಅವರ ಬಳಿ ಪ್ರಶ್ನಿಸಿ ಪೆಟ್ಟು ತಿಂದಿದ್ದಾರೆ. ನಿವೃತ್ತ ಶಿಕ್ಷಕರಾಗಿರುವ ನೀಲಂಪುರದ ರಾಜು ಕೃಷ್ಣ ನಾಯಕ ಅವರು ಈ ಹೊಡೆದಾಟಕ್ಕೆ ಕೈ ಜೋಡಿಸಿದ್ದಾರೆ. ನವೆಂಬರ್ 22ರಂದು ಬೇಲಿಕೇರಿಯ ನಾಯಕ ಬಾರ್ ಎದುರು ಈ ಹೊಡೆದಾಟ ನಡೆದಿದ್ದು, ತಮಗಾದ ಅನ್ಯಾಯದ ವಿರುದ್ಧ ಚಂದ್ರಹಾಸ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
`ತನ್ನ ಒಡೆತನದಲ್ಲಿರುವ ಕಟ್ಟಡವನ್ನು ರಮೇಶ ನಾಯಕ ಅವರು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಕಾರಣ ಈ ಆಕ್ರಮಣ ನಡೆದಿದೆ’ ಎಂದು ಚಂದ್ರಹಾಸ ನಾಯಕ ಅವರು ದೂರಿದ್ದಾರೆ. ಹೊಡೆದಾಟ ನಡೆದ ದಿನವೇ ಚಂದ್ರಹಾಸ ನಾಯಕ ಅವರು ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಲ್ಲಿ ಸಮಾಧಾನ ಸಿಗದ ಕಾರಣ ಕೋರ್ಟಿಗೆ ಹೋಗಿದ್ದ ಚಂದ್ರಹಾಸ ನಾಯಕ ಅವರು ತಮ್ಮ ಮೇಲಾದ ದಾಳಿ ಬಗ್ಗೆ ವಿವರಿಸಿದ್ದಾರೆ.
`ಅವರಿಬ್ಬರು ಸೇರಿ ನನ್ನನ್ನು ದೂಡಿ ಹಾಕಿದ್ದಾರೆ’ ಎಂದವರು ದೂರಿದ್ದು, ಚಂದ್ರಹಾಸ ನಾಯಕ ಅವರ ದೂರು ಆಲಿಸಿದ ನ್ಯಾಯಾಧೀಶರು ಈ ಬಗ್ಗೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಅದರನ್ವಯ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ಶುರು ಮಾಡಿದ್ದಾರೆ.