ಧಾರಾಕಾರವಾಗಿ ಹರಿಯುವ ನದಿಯನ್ನು ಬೇರೆ ದಿಕ್ಕಿನಡೆ ತಿರುಗಿಸಿ ನದಿ ಹರಿವಿನ ಭೂಮಿ ಅತಿಕ್ರಮಿಸಲು ಮಾದೇವ ಮರಾಠಿ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಜೆಸಿಬಿ ಯಂತ್ರಗಳ ಓಡಾಟ ನಡೆಸಿದ್ದು, ನದಿ ನೀರು ಮಣಿಕಂಠ ಮುಕ್ರಿ ಅವರ ಭೂಮಿ ಕಡೆ ಹೋಗುವಂತೆ ಮಾಡಿದ್ದಾರೆ. ನದಿ ನೀರು ತಮ್ಮ ಜಮೀನಿಗೆ ಬರುವುದನ್ನು ನೋಡಿ ಮಣಿಕಂಠ ಮುಕ್ರಿ ಅವರು ಕಂಗಾಲಾಗಿದ್ದಾರೆ.
ಕುಮಟಾದ ಯಾಣದ ಬಳಿಯಿರುವ ಕೋಡಂಬೆಳೆಯ ಮಣಿಕಂಠ ಮಾದೇವ ಮುಕ್ರಿ ಹಾಗೂ ಯಾಣ ಹೊಳೆಬೈಲಿನ ಮಾದೇವ ಪುರುಷ ಮರಾಠಿ ಅವರ ಜಮೀನು ನಡುವೆ ಚಂಡಿಕಾ ನದಿ ಹರಿಯುತ್ತದೆ. ಆ ನದಿಯೇ ಅವರಿಬ್ಬರ ಗಡಿ ಗುರುತಾಗಿದ್ದು, ಮಾದೇವ ಮರಾಠಿ ಅವರು ಆ ಗುರುತನ್ನು ಬದಲಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಷಯವಾಗಿ ಮಾದೇವ ಮರಾಠಿ ಹಾಗೂ ಮಣಿಕಂಠ ಮುಕ್ರಿ ಅವರ ನಡುವೆ ಜಗಳವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಡಿಸೆಂಬರ್ 12ರಂದು ಮಾದೇವ ಮರಾಠಿ ಅವರು ನದಿ ಬಳಿ ಜೆಸಿಬಿ ಓಡಾಟ ನಡೆಸಿದ್ದರು. ನದಿ ನೀರನ್ನು ತಿರುಗಿಸಿ ನದಿ ಹರಿಯುವ ಜಾಗವನ್ನು ತಾವು ಅತಿಕ್ರಮಿಸುವ ಪ್ರಯತ್ನ ಮಾಡಿದ್ದರು. ಈಗಾಗಲೇ ಒಂದಷ್ಟು ಭೂಮಿ ಅತಿಕ್ರಮಿಸಿರುವ ಮಾದೇವ ಮರಾಠಿ ಇನ್ನಷ್ಟು ಜಾಗ ಕಬಳಿಸಲು ಮುಂದಾಗಿರುವುದಕ್ಕೆ ಮಣಿಕಂಠ ಮುಕ್ರಿ ಅವರು ಆಕ್ಷೇಪವ್ಯಕ್ತಪಡಿಸಿದರು.
`ನದಿ ನೀರನ್ನು ತಮ್ಮ ಜಮೀನಿನ ಕಡೆ ತಿರುಗಿಸಿದರೆ ನಮಗೆ ಅಪಾಯ’ ಎಂದು ಮಣಿಕಂಠ ಮುಕ್ರಿ ಅವರು ಹೇಳಿದರು. ಆದರೆ, ಇದರಿಂದ ಮಾದೇವ ಮರಾಠಿ ಅವರು ಸಿಟ್ಟಾದರು. ಮಾದೇವ ಮರಾಠಿ ಅವರ ಜೊತೆ ಈಶ್ವರ ಹರಿಹರ ಮರಾಠಿ, ಮಹೇಂದ್ರ ಮಾದೇವ ಮರಾಠಿ, ಸಂಗೀತಾ ಸದಾಶಿವ ಮರಾಠಿ, ಸುಶೀಲ ಕೃಷ್ಣ ಮರಾಠಿ, ಶ್ಯಾಮಲಾ ಶಾಂಬ ಮರಾಠಿ, ಸದಾಶಿವ ಪುರುಷ ಮರಾಠಿ ಹಾಗೂ ಗೀತಾ ಉಮೇಶ ಮರಾಠಿ ಸೇರಿ ಮಣಿಕಂಠ ಮುಕ್ರಿ ಅವರನ್ನು ನಿಂದಿಸಿದರು.
ಈ ಬಗ್ಗೆ ಮಣಿಕಂಠ ಮುಕ್ರಿ ಅವರು ಪೊಲೀಸ್ ದೂರು ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ತನಿಖೆ ಶುರು ಮಾಡಿದ್ದಾರೆ.