ಕುಮಟಾದ ಈಶ್ವರ ಮುಕ್ರಿ ಅವರು ಕಾಣೆಯಾಗಿ ಐದು ತಿಂಗಳಾಗಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. `ಪೊಲೀಸ್ ದೂರು ನೀಡಿದರೂ ಮಗನನ್ನು ಹುಡುಕುವ ಕಾರ್ಯ ನಡೆದಿಲ್ಲ’ ಎಂದು ಈಶ್ವರ ಮುಕ್ರಿ ಅವರ ತಾಯಿ ಮಾದೇವಿ ಮುಕ್ರಿ ಅವರು ಆರೋಪಿಸಿದ್ದಾರೆ.
ಕುಮಟಾದ ಬಗ್ಗೋಣದಲ್ಲಿ ಮಾದೇವಿ ನಾಗು ಮುಕ್ರಿ ಅವರು ವಾಸವಾಗಿದ್ದಾರೆ. ಅವರ ಮಗ ಈಶ್ವರ ಮುಕ್ರಿ ಅವರು ಜೂನ್ 15ರ ಮಧ್ಯಾಹ್ನ 1 ಗಂಟೆ ಅವಧಿಯಲ್ಲಿ ಮನೆ ತೊರೆದಿದ್ದು, ನಂತರ ಮರಳಿಲ್ಲ. `ಪತ್ನಿ ಬಿಟ್ಟಿರುವ ನೋವಿನಲ್ಲಿ ಈಶ್ವರ ಮುಕ್ರಿ ಅವರು ಮನೆ ತೊರೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈಶ್ವರ ಮುಕ್ರಿ ಅವರು ರಘುಪತಿ ಮುಕ್ರಿ ಅವರ ಜೊತೆಗಿರುತ್ತಿದ್ದು, ಅವರ ಮೇಲೆ ತಮಗೆ ಅನುಮಾನವಿದೆ’ ಎಂದು 70 ವರ್ಷದ ಮಾದೇವಿ ಮುಕ್ರಿ ಅವರು ಹೇಳಿದ್ದಾರೆ.
`ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಮಗನನ್ನು ಹುಡುಕಿಕೊಡುವಂತೆ ಪೊಲೀಸ್ ಅಧೀಕ್ಷಕರಿಗೂ ಮನವಿ ಮಾಡಿದ್ದೇನೆ’ ಎಂದು ಮಾದೇವಿ ಮುಕ್ರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರಲ್ಲಿ ವಿವರಿಸಿದ್ದಾರೆ. ಕರ್ತವ್ಯಕೋಪ ಎಸಗಿದ ಪೊಲೀಸರ ವರ್ಗಾವಣೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಒತ್ತಾಯಿಸಿದ್ದಾರೆ. ಜೊತೆಗೆ ಕಾಣೆಯಾದ ಈಶ್ವರ ಮುಕ್ರಿ ಅವರನ್ನು ಹುಡುಕಿಕೊಡುವಂತೆ ನಾಗು ಮುಕ್ರಿ, ಜಟ್ಟಿ ಮುಕ್ರಿ, ಭಾಸ್ಕರ್ ಮುಕ್ರಿ, ಗಣೇಶ್ ಮುಕ್ರಿ ಹಾಗೂ ಸುಧಾಕರ ನಾಯ್ಕ ಅವರು ಆಗ್ರಹಿಸಿದ್ದಾರೆ.