ದೇವಾಲಯದ ಹುಂಡಿ ಒಡೆದು ಹಣ ದೋಚಿದ ಕಳ್ಳನೊಪ್ಪ ಅಲ್ಲಿಂದ ಪರಾರಿಯಾಗುವ ದಾವಂತದಲ್ಲಿ ಬೈಕ್ ಬಿಟ್ಟು ಹೋಗಿದ್ದು, ಅದೇ ಬೈಕಿನ ಆಧಾರದಲ್ಲಿ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ.
ಹಳಿಯಾಳದ ಅಮ್ಮನಕೊಪ್ಪ ಗ್ರಾಮದ ಮೈಲಾರ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ಇಲ್ಲಿನ ಮೈಲಾರ ದೇವಸ್ಥಾನಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಒಡೆದಿದ್ದಾರೆ. ದೇವಾಲಯದ ಹುಂಡಿಯಲ್ಲಿದ್ದ ಸುಮಾರು 7 ಸಾವಿರ ರೂ ಹಣ ಎಗರಿಸಿದ್ದಾರೆ. ಈ ವಿಷಯ ಅರಿತ ಭಕ್ತರು ಆತಂಕಕ್ಕೆ ಒಳಗಾಗಿದ್ದು, ದೇವಾಲಯದ ಬಳಿ ಅನುಮಾನಾಸ್ಪದ ಬೈಕ್ ಕಾಣಿಸಿದೆ.
ಆ ಬೈಕಿನ ಆಧಾರದ ಜೊತೆ ಸಿಸಿ ಕ್ಯಾಮರಾ ಮೂಲಕವೂ ಹುಡುಕಾಟ ನಡೆಸಿದಾಗ ದಾವಣಗೆರೆಯ ಪ್ರಸನ್ನಕುಮಾರ ಎಂಬಾತರ ಮೇಲೆ ಅನುಮಾನ ಮೂಡಿದೆ. ಪ್ರಸನ್ನಕುಮಾರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದು, ತನಿಖೆ ಅವಧಿಯಲ್ಲಿ ಬನವಾಸಿ ಬಳಿಯ ದೇವಾಲಯದಲ್ಲಿಯೂ ಆತ ಕಳ್ಳತನ ಮಾಡಿರುವುದು ದೃಢವಾಗಿದೆ. ಆತನ ಬಳಿಯಿದ್ದ 2500ರೂ ಹಣದ ಜೊತೆ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ.