ಡಿಸ್ಕೋಂಟ್ ಸೇಲ್’ನಲ್ಲಿ ಅಂಗಿ-ಪ್ಯಾoಟು-ಚೂಡಿದಾರ ಖರೀದಿಸಿದ ವ್ಯಕ್ತಿಯೊಬ್ಬರು ಮೀನು ಖರೀದಿಗಾಗಿ ಮಾರುಕಟ್ಟೆಗೆ ಹೋಗಿದ್ದು, ಅಲ್ಲಿ ಅವರ ಕೈ ಚೀಲ ಕಾಣೆಯಾಗಿದೆ. ಹೀಗಾಗಿ ಆ ಕೈ ಚೀಲ ಹುಡುಕಿಕೊಡುವಂತೆ ಕೋರಿ ಅವರು ಪೊಲೀಸರ ಮೊರೆ ಹೋಗಿದ್ದಾರೆ!
ಕಾರವಾರದ ಹಳಗಾದ ಇನಾನ್ಸ ಸಂತಾನ್ ಅಲ್ಪಾನ್ಸೋ ಅವರು ಡಿಸೆಂಬರ್ 20ರಂದು ತಮ್ಮ ಮಗಳನ್ನು ಕಾಲೇಜಿಗೆ ಬಿಡಲು ನಗರಕ್ಕೆ ಬಂದಿದ್ದರು. ಮಗಳನ್ನು ಕಾಲೇಜಿಗೆ ಬಿಟ್ಟ ನಂತರ ಅವರಿಗೆ ಕಾಜುಭಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ `ಡಿಸ್ಕೋಂಟ್ ಸೇಲ್’ ನಡೆಯುತ್ತಿರುವುದು ಕಾಣಿಸಿತು. ಅಲ್ಲಿಗೆ ಹೋದ ಅವರು 500ರೂ ಕೊಟ್ಟು ಪ್ಯಾಂಟ್ ಖರೀದಿಸಿದರು. 350ರೂಪಾಯಿಯ ಅಂಗಿಯನ್ನು ಖರೀದಿಸಿದರು. ಅಲ್ಲಿದ್ದ ಚೂಡಿದಾರವೊಂದು ಚಂದ ಕಾಣಿಸಿದ್ದು, ಚೌಕಾಸಿ ಮಾಡಿ ಅದನ್ನು 500ರೂಪಾಯಿಗೆ ಖರೀದಿಸಿದರು. ಎರಡು ಬಾಟಲಿಗಳನ್ನು ಜೊತೆಗೆ ತೆಗೆದುಕೊಂಡರು. ಕಡಿಮೆ ಬೆಲೆಗೆ ಸಿಕ್ಕಿತು ಎಂದು ನಾಲ್ಕು ಸ್ಪೇಯರ್ ಖಾಲಿ ಬಾಟಲಿಗಳನ್ನು ತೆಗೆದುಕೊಂಡರು.
ಅದಾದ ನಂತರ ಇನಾನ್ಸ ಅಲ್ಪಾನ್ಸೋ ಅವರಿಗೆ `ಮೀನು ತನ್ನಿ’ ಎಂದು ಮನೆಯಲ್ಲಿ ಹೇಳಿದ್ದು ನೆನಪಾಯಿತು. ನೇರವಾಗಿ ಮೀನು ಮಾರುಕಟ್ಟೆಗೆ ಹೋದ ಅವರು ಮಾರುಕಟ್ಟೆ ಹೊರಭಾಗದಲ್ಲಿ ಬೈಕ್ ನಿಲ್ಲಿಸಿದರು. ಡಿಸ್ಕೋಂಟ್ ಸೇಲ್’ನಲ್ಲಿ ತಂದಿದ್ದ ಸಾಮಗ್ರಿಗಳ ಚೀಲವನ್ನು ಬೈಕ್ ಮೇಲೆಯಿರಿಸಿ ಮಾರುಕಟ್ಟೆ ಪ್ರವೇಶಿಸಿದರು. ಬಗೆ ಬಗೆಯ ಮೀನು ಖರೀದಿಸಿ ಹೊರ ಬಂದ ಇನಾನ್ಸ ಅಲ್ಪಾನ್ಸೋ ಅವರಿಗೆ ಬೈಕಿನ ಮೇಲಿದ್ದ ಚೀಲ ಕಾಣಲಿಲ್ಲ. ಅಕ್ಕ-ಪಕ್ಕದ ಅಂಗಡಿಯವರ ಬಳಿ ಅವರು ಆ ಚೀಲದ ಬಗ್ಗೆ ವಿಚಾರಿಸಿದರು. ಸುತ್ತಲು ಹುಡುಕಾಟ ನಡೆಸಿದರು. ಎಲ್ಲಿ ಹುಡುಕಿದರೂ ಅವರ ಆ ಕೈಚೀಲ ಮಾತ್ರ ಸಿಗಲಿಲ್ಲ.
ಹೊಸದಾಗಿ ಖರೀದಿಸಿದ ಅಂಗಿ-ಪ್ಯಾoಟು-ಚೂಡಿದಾರವಿದ್ದ ಕೈ ಚೀಲ ಎಗರಿಸಿದ ಕಳ್ಳರ ಬಗ್ಗೆ ಅವರು ಬೈದುಕೊಂಡರು. ಖರೀದಿಸಿದ ಮೀನು ಹಿಡಿದು ಮನೆಗೆ ಹೋದ ಇನಾನ್ಸ ಅಲ್ಪಾನ್ಸೋ ಅವರು ಕೈ ಚೀಲ ಕದ್ದವರ ಬಗ್ಗೆ ಆಳವಾಗಿ ಚಿಂತಿಸಿದರು. ಸಂಜೆ ಮತ್ತೆ ಕಾರವಾರಕ್ಕೆ ಬಂದ ಅವರು ಆ ಕಳ್ಳರಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿ ಪೊಲೀಸ್ ಠಾಣೆಗೆ ಹೋದರು. `ಬೈಕ್ ಮೇಲೆ ಇದ್ದ ಕೈ ಚೀಲ ಕಳ್ಳತನವಾಗಿದೆ’ ಎಂದು ಕಾರವಾರ ನಗರಠಾಣೆಯಲ್ಲಿ ದೂರು ದಾಖಲಿಸಿದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನಾನ್ಸ ಅಲ್ಪಾನ್ಸೋ ಅವರ ಕೈ ಚೀಲದ ಹುಡುಕಾಟ ನಡೆಸಿದ್ದಾರೆ.