ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಭಾಗದಲ್ಲಿಯೂ ಬೀಡಾಡಿ ನಾಯಿಗಳ ಕಾಟ ಹೆಚ್ಚಾಗಿದ್ದು, ಅದರಲ್ಲಿಯೂ ಶಿರಸಿಯಲ್ಲಿ ಹುಚ್ಚು ನಾಯಿ ಪತ್ತೆಯಾಗಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಸಮಯ ಪ್ರಜ್ಞೆಯಿಂದ ಆ ಹುಚ್ಚು ನಾಯಿ ಮಕ್ಕಳ ಮೇಲೆ ಆಕ್ರಮಣ ನಡೆಸುವುದು ತಪ್ಪಿದೆ.
ಶಿರಸಿಯ ಅಂಬೇಡ್ಕರ್ ಸರ್ಕಲ್ ಬಳಿ ತೆರಳುತ್ತಿದ್ದ ಮಕ್ಕಳ ಮೇಲೆ ಹುಚ್ಚು ನಾಯಿ ದಾಳಿಗೆ ಮುಂದಾಗಿತ್ತು. ಇದನ್ನು ಗಮನಿಸಿದ ಸಂಚಾರಿ ಪೋಲಿಸ್ ಠಾಣೆಯ ಸಿಬ್ಬಂದಿ ಅನಿಲ್ ಬಿರಾದಾರ್ ತಕ್ಷಣ ಜಾಗೃತರಾಗಿ ಆ ನಾಯಿಗೆ ಕಡಿವಾಣ ಹಾಕಿದರು. ತೇಲಂಗ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ ಜೋಗಳೆಕರ್ ಅವರ ಸಹಾಯದಿಂದ ಆ ನಾಯಿಯನ್ನು ಅಲ್ಲಿಯೇ ಬಂಧಿಸಿದರು. ಆ ಮೂಲಕ ಪೊಲೀಸ್ ಸಿಬ್ಬಂದಿ ಮಕ್ಕಳ ಜೀವ ಕಾಪಾಡಿದರು.
ಅನಿಲ್ ಬಿರಾದಾರ್ ಅವರು ಸರಪಳಿ ಬಳಸಿ ನಾಯಿಯನ್ನು ಕಬ್ಬಿಣದ ಗ್ರಿಲ್ಸ್’ಗೆ ಕಟ್ಟಿದ್ದು, ನಗರಸಭೆಯ ಪೌರ ಕಾರ್ಮಿಕರು ಆ ನಾಯಿಯನ್ನು ಅಲ್ಲಿಂದ ಸ್ಥಳಾಂತರಿಸಿದರು. ಹುಚ್ಚು ಹಿಡಿದು ಜೊಲ್ಲು ಸುರಿಸುತ್ತಿದ್ದ ನಾಯಿ ಅತಿ ಅಪಾಯದ ಸ್ಥಿತಿಯಲ್ಲಿದೆ. `ಹುಚ್ಚು ಹಿಡಿದ ನಾಯಿ ಗರಿಷ್ಟ 10 ದಿನಗಳವರೆಗೆ ಮಾತ್ರ ಬದುಕುವ ಸಾಧ್ಯತೆಯಿದ್ದು, ಈ ಅವಧಿಯಲ್ಲಿ ಬೇರೆ ನಾಯಿಗಳಿಗೆ ಕಚ್ಚದಂತೆ ಎಚ್ಚರಿಕೆವಹಿಸಬೇಕು. ಬೇರೆ ನಾಯಿಗೆ ಕಚ್ಚಿದರೆ ಉಳಿದ ನಾಯಿಗಳಿಗೂ ಸೋಂಕು ಹರಡುವ ಅಪಾಯವಿದೆ’ ಎಂದು ಪಶುವೈದ್ಯರು ವಿವರಿಸಿದರು.