ಫೆಬ್ರವರಿ 11ರಿಂದ 19ರವರೆಗೆ ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಬರುವ ಬಹುತೇಕರು ಕಾರುಗಳಲ್ಲಿ ಆಗಮಿಸುವ ಕಾರಣ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿದೆ. ಕಾರು ತರುವ ಬದಲು ಬೈಕು ಹಾಗೂ ಸರ್ಕಾರಿ ಬಸ್ಸುಗಳನ್ನು ಬಳಸಿದರೆ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಸಾಧ್ಯ ಎನ್ನುವ ಬಗ್ಗೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆದಿದೆ.
ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ವಾಹನ ದಟ್ಟಣೆ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಿದ್ದು, ಅನೇಕರು ವಿವಿಧ ಸಲಹೆ ನೀಡಿದರು. `ವಾಹನಗಳ ಸಂಚಾರವನ್ನು ಹಂತಹAತವಾಗಿ ಏಕಮುಖವಾಗಿ ಸಂಚರಿಸಲು ವ್ಯವಸ್ಥೆ ಮಾಡಿಕೊಡಿ’ ಎಂದು ಶಿವರಾಮ ಹೆಬ್ಬಾರ್ ಅವರು ಪೊಲೀಸರಿಗೆ ಸೂಚಿಸಿದರು. `ಸಾರ್ವಜನಿಕರು ಸಹ ಕಾರುಗಳಲ್ಲಿ ಬರುವ ಬದಲು ಸಣ್ಣ ಸಣ್ಣ ವಾಹನ ಬಳಸಿದರೆ ಅನುಕೂಲ. ಜಾತ್ರಾ ಪಟ್ಟಣದವರೆಗೂ ವಾಹನ ಒಯ್ಯುವ ಬದಲು 200-300ಮೀಟರ್ ದೂರವಿಟ್ಟರೆ ಒಳಿತು’ ಎಂದು ಶಿವರಾಮ ಹೆಬ್ಬಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
`ಬೀದಿದೀಪಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಹೆಚ್ಚುವರಿಯಾಗಿ ಮೊಬೈಲ್ ಶೌಚಗೃಹಗಳ ವ್ಯವಸ್ಥೆ ಮಾಡಿಕೊಡಬೇಕು. ಫೆ 8 ರಿಂದ 22ರವರೆಗೆ ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜು ಮಾಡಬೇಕು. ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಸೂಚಿಸಿದರು. `ಆರೋಗ್ಯ ಇಲಾಖೆಯವರು ತುರ್ತು ಚಿಕಿತ್ಸೆಗೆ ತಾತ್ಕಾಲಿಕ ಘಟಕ ರಚಿಸಿ, ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಸಿದ್ಧತೆಯಲ್ಲಿರಬೇಕು. ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಆರೋಗ್ಯ ಇಲಾಖೆಗೆ ಹೆಬ್ಬಾರ್ ಸೂಚಿಸಿದರು.
`ಗ್ರಾಮೀಣ ಭಾಗಗಳಿಗೆ ಅಗತ್ಯವಿರುವಲ್ಲಿ ವಿಶೇಷ ಬಸ್ ಓಡಿಸಬೇಕು. ಹೆಚ್ಚುವರಿ ಬಸ್ ಗಳ ಅಗತ್ಯವಿದ್ದರೆ ಹೊರಗಿನಿಂದ ತರಿಸಿ’ ಎಂದು ಬಸ್ ಘಟಕದ ಅಧಿಕಾರಿಗಳಿಗೆ ತಿಳಿಸಿದರು. `ಅಮ್ಯೂಸ್ ಮೆಂಟ್ ಪಾರ್ಕ್, ಮನರಂಜನೆ ವಿಚಾರದಲ್ಲಿ ಜನರಿಗೆ ತೊಂದರೆಯಾಗದAತೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಜನವರಿ 3 ರಂದು ಮುಂದಿನ ಹಂತದ ಸಿದ್ಧತೆ ಬಗ್ಗೆ ಪಟ್ಟಣ ಪಂಚಾಯಿತಿಯಲ್ಲಿ ಸಭೆ ನಡೆಸಲಾಗುತ್ತದೆ’ ಎಂದರು. `ಜಾತ್ರೆಯಲ್ಲಿ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ಜಾತ್ರೆಯ ಯಶಸ್ಸಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಮದೇವಿ ದೇವಸ್ಥಾನದ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.
`ಫುಟ್ ಪಾತ್ ಮೇಲಿನ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಸಂಚಾರ ವ್ಯವಸ್ಥೆಗೆ ಅನುಕೂಲ ಆಗಬೇಕು. ಎಲ್ಲ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಅಧಿಕಾರಿಗಳು ಕಾನೂನು ಪುಸ್ತಕ ಬದಿಗಿಟ್ಟು, ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು’ ಎಂದು ಎಚ್ಚರಿಸಿದರು.
`ಜಾತ್ರೆಯಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಸಂಜೆಯ ನಂತರ ರಾತ್ರಿಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು. ಆ ವಾಹನಗಳನ್ನು ಇಡಗುಂದಿ, ಗುಳ್ಳಾಪುರ ಹಾಗೂ ಹಿಟ್ಟಿನಬೈಲ್ ಕಡೆ ನಿಲುಗಡೆ ಮಾಡಲಾಗುವುದು. ಸಣ್ಣ ವಾಹನಗಳಿಗೆ ತಟಗಾರ ಕ್ರಾಸಿನಿಂದ ನಿಸರ್ಗಮನೆ ಮೂಲಕ ಬಿಸಗೋಡ ಕ್ರಾಸಿಗೆ ತಲುಪುವ ಒಳಮಾರ್ಗದಲ್ಲಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಜಾತ್ರೆಗೆ ಬರುವ ವಾಹನಗಳಿಗೆ ಪಟ್ಟಣದ ಮದರ್ ತೆರೆಸಾ ಬಳಿಯ ಮೈದಾನ, ಐಬಿ ರಸ್ತೆ ಪಕ್ಕ, ಹಳೆ ತಹಸೀಲ್ದಾರ ಕಚೇರಿ ಹಿಂಭಾಗ, ಉರ್ದು ಶಾಲೆ ಮೈದಾನ, ಎಪಿಎಂಸಿ ಆವಾರ, ಅರಣ್ಯ ಇಲಾಖೆಯ ಸಸ್ಯೋದ್ಯಾನ ಮುಂತಾದೆಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಪಿಐ ರಮೇಶ ಹಾನಾಪುರ ಮಾಹಿತಿ ನೀಡಿದರು.
ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಡಿವೈಎಸ್‌ಪಿ ಗೀತಾ ಪಾಟೀಲ, ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ವಿಜಯ ಮಿರಾಶಿ, ವಿ ಎಸ್ ಭಟ್ಟ ಇತರರಿದ್ದರು.