ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಸೇರಿ ಯಲ್ಲಾಪುರದ ಅರಬೈಲ್ ಬಳಿ ಅಲೆದಾಡುತ್ತಿದ್ದ ವೃದ್ಧೆ ಮಹಿಳೆಯ ಮೈ ಮುಟ್ಟಿದ್ದಾರೆ. ಇದನ್ನು ತಡೆಯಲು ಬಂದ ಗಣೇಶ ಸಿದ್ದಿ ಅವರಿಗೆ ಅವರಿಬ್ಬರು ಬೈದು ಹೊಡೆದಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಅರಬೈಲ್ ಬಳಿ ಶಿವಾಲಕ್ಕಿ ಎಂಬ ಮಹಿಳೆಯೊಬ್ಬರು ಅಲೆದಾಡುತ್ತಿದ್ದರು. ಗೊತ್ತು ಗುರಿಯಿಲ್ಲದ ಆ ವೃದ್ಧೆಯನ್ನು ತಾಳಿಕುಂಬ್ರಿಯ ಕೇಶವ ಸಿದ್ದಿ ಹಾಗೂ ಉಪಳೇಶ್ವರ ಜೂಜಿನಬೈಲಿನ ವಿನಾಯಕ ಸಿದ್ದಿ ಕಾಡಿಸುತ್ತಿದ್ದರು. ಜನವರಿ 7ರ ಸಂಜೆ 6.30ರ ವೇಳೆಗೆ ಅವರಿಬ್ಬರು ಸೇರಿ ಆ ವೃದ್ಧೆಯ ಮೈ ಮುಟ್ಟಿದ್ದರು. ಅಲ್ಲಿನ ಮಾರುತಿ ಗದ್ದೆ ಬಳಿ ಇದ್ದ ವೃದ್ಧೆಯ ಮಾನಕ್ಕೆ ಅವಮಾನ ಆಗುವ ರೀತಿ ಅವರಿಬ್ಬರು ವರ್ತಿಸುತ್ತಿದ್ದರು.
ಈ ವೇಳೆ ಅರಬೈಲ್ ಸಿದ್ದಿ ಕಾಲೋನಿಯ ಗಣೇಶ ಮುನಿಯಪ್ಪ ಸಿದ್ದಿ ಅವರು ತಮ್ಮ ಚಿಕ್ಕಮ್ಮ ಲಲಿತಾ ಸಿದ್ದಿ ಅವರ ಜೊತೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದರು. ದನಕರುಗಳನ್ನು ನೋಡಿ ಬರಲು ಮೊಗದ್ದೆಯಲ್ಲಿರುವ ತಮ್ಮ ಜಮೀನು ಕಡೆ ಹೊರಟಿದ್ದರು. ಆ ವೇಳೆ ಗಣೇಶ ಸಿದ್ದಿ ಹಾಗೂ ಲಲಿತಾ ಸಿದ್ದಿ ಅವರಿಗೆ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಕಾಣಿಸಿದರು. ಅವರಿಬ್ಬರು ಸೇರಿ ವೃದ್ಧೆಯ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನೋಡಿದರು.
ಇದರಿಂದ ಸಿಟ್ಟಾದ ಗಣೇಶ ಸಿದ್ದಿ ಆ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ವೃದ್ಧೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಈ ವೇಳೆ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಸೇರಿ ಗಣೇಶ ಸಿದ್ದಿ ಅವರ ವಿರುದ್ಧ ತಿರುಗಿ ಬಿದ್ದರು. ವೃದ್ಧೆ ಮೈ ಮುಟ್ಟುವಾಗ ತಡೆದ ಕಾರಣ ಗಣೇಶ ಸಿದ್ದಿ ಅವರಿಗೆ ಕೇಶವ ಸಿದ್ದಿ ಹೊಡೆದರು. ಈ ವೇಳೆ ಅಲ್ಲಿದ್ದ ಮಂಜು ನಾಯ್ಡು ಅವರು ಜೋರಾಗಿ ಬೊಬ್ಬೆ ಹೊಡೆಯುತ್ತ ಬಂದಿದ್ದು, ಅವರನ್ನು ನೋಡಿದ ಕೇಶವ ಸಿದ್ದಿ ಹಾಗೂ ವಿನಾಯಕ ಸಿದ್ದಿ ಓಡಿ ಪರಾರಿಯಾದರು. ಈ ಎಲ್ಲಾ ವಿಷಯಗಳ ಬಗ್ಗೆ ಗಣೇಶ ಸಿದ್ದಿ ಮಾಹಿತಿ ನೀಡಿದರು.