ನಿತ್ಯವೂ ಸರಾಯಿ ಕುಡಿಯುತ್ತಿದ್ದ ಬನವಾಸಿಯ ಜಾನಕ ಬಂದಿಗೇರ್ ಅವರು ಸರಾಯಿ ಗುಂಗಿನಲ್ಲಿ ವಿಷ ಕುಡಿದಿದ್ದು, ಅದಾದ ನಂತರ `ನನ್ನನ್ನು ಕಾಪಾಡು’ ಎಂದು ದೇವರ ಮೊರೆ ಹೋಗಿದ್ದಾರೆ. ಆದರೆ, ಆ ದೇವರಿಂದಲೂ ಜಾನಕ ಬಂದಿಗೇರ್ ಅವರನ್ನು ಕಾಪಾಡಲು ಆಗಲಿಲ್ಲ!
Advertisement. Scroll to continue reading.
ಶಿರಸಿ ಬನವಾಸಿ ಮೊಗಳ್ಳಿಯ ಜಾನಕ ಗುತ್ಯಪ್ಪ ಬಂದಿಗೇರ್ (54) ಅವರು ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನಿತ್ಯವೂ ಅವರು ಸರಾಯಿ ಕುಡಿಯುತ್ತಿದ್ದರು. ಮದ್ಯ ಸೇವನೆ ಒಳ್ಳೆಯದಲ್ಲ ಎಂದು ಅವರ ಪತ್ನಿ ಬುದ್ದಿ ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಡಿಸೆಂಬರ್ 27ರಂದು ಮೊಗಳ್ಳಿಯ ಕರಿಕಲ್ಲು ಅಜ್ಜ ದೇವಾಲಯಕ್ಕೆ ಹೋಗಿದ್ದ ಜಾನಕ ಬಂದಿಗೇರ್ ಅವರು `ತನ್ನನ್ನು ಉಳಿಸು’ ಎಂದು ಕೂಗಾಡುತ್ತಿದ್ದರು. `ದೇವರೇ ನನ್ನನ್ನು ಕಾಪಾಡು’ ಎಂದು ಅವರು ಪದೇ ಪದೇ ಬೇಡಿಕೊಳ್ಳುತ್ತಿದ್ದರು. ಇದನ್ನು ನೋಡಿದ ಮೊಗವಳ್ಳಿಯ ಚೌಡಪ್ಪ ಬಂದಿಗೇರ್ ಅವರು `ಏನಾಯಿತು?’ ಎಂದು ಪ್ರಶ್ನಿಸಿದರು. ಆಗ, ಜಾನಕ ಬಂದಿಗೇರ್ ಅವರು `ಡಿಸೆಂಬರ್ 22ರ ರಾತ್ರಿ ಮನೆಯಲ್ಲಿರುವ ಕಳೆ ನಾಶಕ ಸೇವಿಸಿದ್ದೇನೆ’ ಎಂಬ ವಿಷಯ ಬಾಯ್ಬಿಟ್ಟರು!
ತಕ್ಷಣ ಚೌಡಪ್ಪ ಬಂದಿಗೇರ್ ಅವರು ಜಾನಕ ಬಂದಿಗೇರ್ ಅವರನ್ನು ಶಿರಸಿ ಮಾರಿಕಾಂಬಾ ಆಸ್ಪತ್ರೆಗೆ ಕರೆದೊಯ್ದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಜನವರಿ 5ರಂದು ಜಾನಕ ಬಂದಿಗೇರ್ ಅವರು ಸಾವನಪ್ಪಿದರು.