`ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಬಹಿಷ್ಕಾರ ಹಾಕುವುದು ಕಾನೂನುಬಾಹಿರವಾಗಿದ್ದು, ಬಹಿಷ್ಕಾರ ಹಾಕಿದವರಿಗೆ ಕಾನೂನು 1 ಲಕ್ಷ ರೂ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ’ ಎಂದು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮಾಹಿತಿ ನೀಡಿದ್ದಾರೆ.
Advertisement. Scroll to continue reading.
ಕುಮಟಾದ ಮಾಸೂರಿನ ಲುಕ್ಕೇರಿ ಗ್ರಾಮದ ಕೇಶವ ಗಣಪತಿ ಅಂಬಿಗ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಬಗ್ಗೆ ಅರಿತ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಿಸ್ ಅವರು ಈ ಬಗ್ಗೆ ಜನ ಜಾಗೃತಿಗಾಗಿ ಕಾನೂನಿ ಅರಿವು ಮೂಡಿಸಿದ್ದಾರೆ. `2025ರ ವಿಧಾನ ಸಭೆಯಲ್ಲಿ ಸಾಮಾಜಿಕ ಬಹಿಷ್ಕಾರ ಮಸೂದೆ ಮಂಡನೆ ಆಗಿದೆ. ಅದರ ಪ್ರಕಾರ ಯಾವುದೇ ಕುಟುಂಬಕ್ಕೂ ಬಹಿಷ್ಕಾರ ಹಾಕುವ ಹಾಗಿಲ್ಲ’ ಎಂದವರು ವಿವರಿಸಿದ್ದಾರೆ.
`ಬಹಿಷ್ಕಾರ ಮಾಡಲು ನಡೆಸುವ ಸಭೆ ಹಾಗೂ ಪಂಚಾಯತಿ ನಡೆಸಿದವರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತದೆ. ಇಂಥ ಪ್ರಕರಣದಲ್ಲಿ ಒತ್ತಡ ಹೇರಿದವರನ್ನು ಸಹ ಆರೋಪಿ ಎಂದು ಪರಿಗಣಿಸಲಾಗುತ್ತದೆ. ಬಹಿಷ್ಕಾರದ ಬಗ್ಗೆ ಸಭೆ ಸಮಾವೇಶ ನಡೆಸುವುದು ಸಹ ಕಾನೂನುಬಾಹಿರ ಎಂದು ಮಸೂದೆಯಲ್ಲಿದೆ’ ಎಂದವರು ಹೇಳಿದ್ದಾರೆ. ಸದ್ಯ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬದವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಧೈರ್ಯ ಹೇಳಿದ್ದಾರೆ.
`ಎಲ್ಲಿಯೇ ಇಂಥ ಅಮಾನವೀಯ ಪ್ರಕರಣ ನಡೆದರೂ 7892221590ಗೆ ಫೋನ್ ಮಾಡಿ ತಮ್ಮ ಗಮನಕ್ಕೆ ತನ್ನಿ. ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ಹೋರಾಟ ನಡೆಸೋಣ’ ಎಂದವರು ಕರೆ ನೀಡಿದ್ದಾರೆ.