ಕಡಿಮೆ ದರಕ್ಕೆ ಒಳ್ಳೆಯ ಸಾಮಗ್ರಿ ಸಿಗುತ್ತದೆ ಎಂದು ನಂಬಿದ ಶಿರಸಿಯ ವ್ಯಾಪಾರಿಯೊಬ್ಬರು 3.60 ಲಕ್ಷ ರೂ ಕಳೆದುಕೊಂಡಿದ್ದಾರೆ. ಸಾಮಗ್ರಿ ಕಳುಹಿಸುವುದಾಗಿ ನಂಬಿಸಿದವರ ಫೋನ್ ಸ್ವಿಚ್ ಆಫ್ ಆಗಿದ್ದು, ಬೆಂಗಳೂರಿಗೆ ಹೋಗಿ ಹುಡುಕಿದರೂ ಹಣಪಡೆದವ ಸಿಕ್ಕಿಲ್ಲ.
Advertisement. Scroll to continue reading.
ಶಿರಸಿಯ ಬನವಾಸಿ ಬಳಿಯ ಪಂಪವನ ಹತ್ತಿರ ವಾಸಿಸುವ ವಿನಿತ್ ಪರಮೇಶ್ವರ ಕೆಳಗಿನಮನೆ ಅವರು ಸೊರಬಾ ರಸ್ತೆಯಲ್ಲಿ ಹಾರ್ಡವೇರ್ ಮಳಿಗೆ ನಡೆಸುತ್ತಾರೆ. ಕದಂಬ ಬಿಲ್ಡಿಂಗ್ ಸಲ್ಯುಶನ್ ಎಂಬ ಅಂಗಡಿಯ ಮೂಲಕ ಅವರು ವಿವಿಧ ಕಬ್ಬಿಣದ ಸಾಮಗ್ರಿಗಳ ಮಾರಾಟ ಮಾಡುತ್ತಾರೆ. ಕಳೆದ ಮೂರು ವರ್ಷಗಳಿಂದ ವಿನಿತ್ ಅವರು ಮಳಿಗೆಗೆ ಬೇಕಾಗಿರುವ ಎಲ್ಲಾ ಬಗೆಯ ಸ್ಟೀಲುಗಳನ್ನು ಹೈದರಾಬಾದ್, ತಮಿಳುನಾಡು, ಪೂನಾ, ಬೆಂಗಳೂರು, ಹುಬ್ಬಳ್ಳಿಯಿಂದ ಖರೀದಿಸುತ್ತಿದ್ದಾರೆ.
ಡಿಸೆಂಬರ್ 9ರಂದು ವಿನಿತ ಅವರ ಅಣ್ಣ ಶಿವರಾಜರ ಮೊಬೈಲಿಗೆ ಫೋನ್ ಒಂದು ಬಂದಿದ್ದು, ಶ್ರೀನಿವಾಸ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕಡಿಮೆ ದರದಲ್ಲಿ ಜಿಐ ಪೈಪ್ ರವಾನಿಸುವುದಾಗಿ ಹೇಳಿದ್ದಾರೆ. . ಬೆಂಗಳೂರಿನ ಯಲಹಂಕಾ ಬಳಿಯಿರುವ ಶ್ರೀ ಗಣೇಶ ಎಂಟರ್ಪ್ರೈಸ್ ಎಂದು ಪರಿಚಯಿಸಿಕೊಂಡ ಶ್ರೀನಿವಾಸ ಅವರು 15 ಟನ್ ಜಿಐ ಪೈಪ್ ರವಾನೆಗೆ ಮುಂಗಡವಾಗಿ 4 ಲಕ್ಷ ಕೇಳಿದ್ದಾರೆ. ಎಲ್ಲರೂ ಕೊಡುವುದಕ್ಕಿಂತ ಕಡಿಮೆ ದುಡ್ಡಿಗೆ ಸಿಗುತ್ತದೆ ಎಂದು ನಂಬಿದ ವಿನಿತ ಅವರು ಶ್ರೀನಿವಾಸ ಅವರು ಸೂಚಿಸಿದ ಖಾತೆಗೆ 3.60 ಲಕ್ಷ ರೂ ಹಣ ಹಾಕಿದ್ದಾರೆ.
ಆದರೆ, ಅಗತ್ಯವಿರುವ ಜಿಐ ಪೈಪ್ ಶಿರಸಿಗೆ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಲು ಶ್ರೀನಿವಾಸ ಅವರಿಗೆ ಫೋನ್ ಮಾಡಿದಾಗ ಆ ನಂ ಸ್ವಿಚ್ ಆಫ್ ಆಗಿದೆ. ಬೆಂಗಳೂರಿಗೆ ಹೋಗಿ ಹುಡುಕಾಟ ನಡೆಸಿದರೂ ಗಣೇಶ ಎಂಟರ್ಪ್ರೈಸ್ ಎಂಬ ಮಳಿಗೆ ಕಾಣಿಸಿಲ್ಲ. ಮೋಸ ಹೋದ ಬಗ್ಗೆ ಅರಿತ ವಿನಿತ್ ಅವರು ಫೋನ್ ಮಾಡಿದ ವ್ಯಕ್ತಿಯ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಶೋಧ ನಡೆಸಿದ್ದಾರೆ.