ಅರಣ್ಯ ಅತಿಕ್ರಮಣ ಹಾಗೂ ಸೊಪ್ಪಿನ ಬೆಟ್ಟ ವಿಷಯದ ಆಳ-ಅಗಲ ಅರಿಯುವುದಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬರುವಂತೆ ಅರಣ್ಯ ಸಚಿವರಿಗೆ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಹ್ವಾನ ನೀಡಿದ್ದಾರೆ. `ಅ ಖರಾಬು’ ಹಾಗೂ `ಬ ಖರಾಬು’ ವಿಷಯದಲ್ಲಿನ ಗೊಂದಲ, ಅರಣ್ಯ ಅತಿಕ್ರಮಣದಾರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಅವರು ಈಶ್ವರ ಖಂಡ್ರೇ ಅವರಿಗೆ ಮಾಹಿತಿ ನೀಡಿದ್ದಾರೆ.
Advertisement. Scroll to continue reading.
`ಉತ್ತರ ಕನ್ನಡ ಜಿಲ್ಲೆ ಅತಿ ಹೆಚ್ಚು ಸೊಪ್ಪಿನ ಬೆಟ್ಟ ಭೂಮಿಯನ್ನು ಹೊಂದಿದ್ದು, ಈ ಸೊಪ್ಪಿನ ಬೆಟ್ಟ ಜಾಗಕ್ಕೆ ಬ್ರಿಟಿಷರ ಕಾಲದಿಂದನೂ ರೈತರು ತೆರಿಗೆ ತುಂಬುತ್ತಿದ್ದಾರೆ. ರೈತರು ತೋಟದ ನಿರ್ವಣೆಗೆ ಸೊಪ್ಪಿನ ಬೆಟ್ಟದಿಂದ ಸೊಪ್ಪು, ಮಣ್ಣು, ದರಕು ಅತ್ಯಗತ್ಯವಾಗಿದೆ. ಆದರೆ, ಇದೀಗ ತೋಟಕ್ಕೆ ಮಣ್ಣು ತೆಗೆಯಲು ಅವಕಾಶ ಸಿಗದೇ ತೋಟಗಳು ಒಣಗುತ್ತಿದೆ. ಹೀಗಾಗಿ ತೋಟದ ಅಭಿವೃದ್ದಿಗಾಗಿ ಪೂರ್ಜರ ಕಾಲದಿಂದಲೂ ಬಿಟ್ಟುಕೊಟ್ಟಿರುವ ಸೊಪ್ಪಿನ ಬೆಟ್ಟ ಪ್ರದೇಶವನ್ನು ಸರಕಾರ ಇದೀಗ ಬ ಖರಾಬ್ ಎಂದು ಪರಿವರ್ತನೆ ಮಾಡುವ ವಿಚಾರವನ್ನು ಕೈಬಿಡಬೇಕು’ ಎಂದವರು ಆಗ್ರಹಿಸಿದ್ದಾರೆ. `ಜಿಲ್ಲೆಯ ಶೇ 80ರಷ್ಟು ಜನ ಸೊಪ್ಪಿನ ಬೆಟ್ಟದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಸೊಪ್ಪಿನ ಬೆಟ್ಟ ಬಳಕೆ ಮೊದಲಿನ ಹಾಗೇ ಇರುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅರಣ್ಯ ಬರುತ್ತದೆ. ಹೀಗಿರುವಾಗ ಅರಣ್ಯ ಇಲಾಖೆಯವರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಅತಿಕ್ರಮಣದಲ್ಲಿನ ಅಡಿಕೆ ಮರ ನಾಶ ಮಾಡುತ್ತಿದ್ದಾರೆ. 60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಫಲ ಬರುತ್ತಿದ್ದ ತೋಟಗಳನ್ನು ನಾಶ ಮಾಡಿದ್ದಾರೆ. ಈಗಾಗಲೇ ಅನೇಕರಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆಯೂ ಅರಿತು ಜನರ ಸಮಸ್ಯೆ ಅರ್ಥ ಮಾಡಿಕೊಂಡು ಬದುಕಲು ಬಿಡಬೇಕು’ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿದ ಅನಂತಮೂರ್ತಿ ಹೆಗಡೆ ಅವರು ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿದ್ದಾರೆ. ಆ ವೇಳೆ ಅರಣ್ಯ ಸಚಿವರು ಅಧಿಕಾರಿಗಳಿಗೆ ಫೋನ್ ಮಾಡಿ `ಜನರಿಗೆ ಸಮಸ್ಯೆ ಮಾಡಬೇಡಿ’ ಎಂದು ಸೂಚಿಸಿದ್ದಾರೆ. ಬನವಾಸಿ ರೈತನ ನಾಯಕರಾದ ರಮೇಶ ನಾಯಕ್ ಕುಪ್ಪಳ್ಳಿ, ರಾಘವೇಂದ್ರ ನಾಯಕ್ ಬಿಸಿಲುಕೊಪ್ಪ, ಸೋಮಶೇಖರ್ ನಾಯಕ್ ಬಾಸಿ, ಜಗದೀಶ ಹೆಗಡೆ ಬ್ಯಾಗದ್ದೆ ಇತರರು ಇದ್ದರು.