ಗೋಕರ್ಣ ಸಮುದ್ರಕ್ಕೆ ಹಾರಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಇಬ್ಬರನ್ನು ಅಲ್ಲಿನ ಜೀವ ರಕ್ಷಕ ಸಿಬ್ಬಂದಿ ಕಾಪಾಡಿದ್ದಾರೆ. ಸಮುದ್ರವನ್ನೇ ನೋಡದ ಗುಲ್ಬರ್ಗಾ ಹಾಗೂ ಬೀದರಿನ ಪ್ರವಾಸಿಗರಿಬ್ಬರು ಆಳ-ಅಗಲ ಅರಿಯದೇ ನೀರಿಗೆ ಹಾರಿದ್ದು, ಜೀವ ರಕ್ಷಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅವರು ಬದುಕುಳಿದಿದ್ದಾರೆ.
Advertisement. Scroll to continue reading.
ಗುಲ್ಬರ್ಗಾದ ಸಂಗಮೇಶ್ ರಾಜಪ್ಪ ಪಾಟೀಲ್ (23) ಹಾಗೂ ಬೀದರಿನ ಜಯಪ್ರಕಾಶ್ (23) ಎಂಬಾತರು ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. 10 ಸ್ನೇಹಿತರ ಜೊತೆ ಅವರು ಮಂಗಳವಾರ ಗೋಕರ್ಣಕ್ಕೆ ಬಂದಿದ್ದು, ನೀರು ಕಂಡ ತಕ್ಷಣ ಸಮುದ್ರಕ್ಕೆ ಹಾರಿದ್ದಾರೆ. ಈಜು ಬಾರದಿದ್ದರೂ ಈಜುವ ಸಾಹಸ ಮಾಡಿದ್ದು, ಅದು ವಿಫಲವಾಗಿದೆ. ಹೀಗಾಗಿ ಆಳ ಸಮುದ್ರದ ಕಡೆ ಹೋದ ಅವರು ನೀರಿನಲ್ಲಿ ಮುಳುಗಿದ್ದಾರೆ.
ಕಡಲತೀರದಿಂದಲೇ ಇದನ್ನು ನೋಡಿದ ರೋಷನ್ ಖಾರ್ವಿ, ಶಿವಪ್ರಸಾದ ಅಂಬಿಗ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಮೋಹನ ಅಂಬಿಗ, ಲೊಕೇಶ ಹರಿಕಂತ್ರ, ರವಿ ನಾಯ್ಕ್, ಶೇಖರ್ ಹರಿಕಂತ್ರ, ಗಜೇಂದ್ರ ಗೌಡ ಕೂಡಲೇ ಸಮುದ್ರಕ್ಕೆ ಹಾರಿದ್ದಾರೆ. ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ಜುಟ್ಟು ಹಿಡಿದು ದಡಕ್ಕೆ ತಂದಿದ್ದಾರೆ. ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಜಗ್ಗು ಹರಿಕಂತ್ರ, ಮಹೇಶ್ ಹರಿಕಂತ್ರ, ಕಮಲಾಕರ ಹೊಸಕಟ್ಟ, ಸಚಿನ್ ಹರಿಕಂತ್ರ, ಮಹಾಬಲೇಶ್ವರ ಹರಿಕಾಂತ್ರ ಜೊತೆ ಗೃಹರಕ್ಷಕ ಸಿಬ್ಬಂದಿ ಗಜಾನನ್ ನಾಗೇಕರ್ ಸಹ ಅವರಿಬ್ಬರ ಜೀವ ಉಳಿಸುವಲ್ಲಿ ಶ್ರಮಿಸಿದ್ದಾರೆ.