ಶಿರಸಿಯ ರಾಮರಾಜ ಬಟ್ಟೆ ಅಂಗಡಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಮುಖೇಶ ಶೆಟ್ಟಿ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ರಾತ್ರಿ 11.30ರವರೆಗೂ ಸ್ನೇಹಿತರ ಜೊತೆಯಿರುವುದಾಗಿ ಹೇಳಿದ್ದ ಮುಖೇಶ ಶೆಟ್ಟಿ ಮರುದಿನ ಶವವಾಗಿದ್ದು, ಸಾವಿನ ಸಮಗ್ರ ತನಿಖೆಗಾಗಿ ಅವರ ಕುಟುಂಬದವರು ಒತ್ತಾಯಿಸಿದ್ದಾರೆ.
Advertisement. Scroll to continue reading.
ಜನವರಿ 6ರಂದು ಸಂಜೆ ಮುಖೇಶ ಯಶ್ವಂತ ಶೆಟ್ಟಿ (29) ಅವರು ಮನೆಯಿಂದ ಹೊರ ಹೋಗಿದ್ದರು. `ಸ್ವಲ್ಪ ಕೆಲಸ ಇದೆ. ಹೋಗಿ ಬರುವೆ’ ಎಂದು ಅಮ್ಮನ ಬಳಿ ಹೇಳಿದ್ದರು. ಕತ್ತಲು ಕವಿದರೂ ಮಗ ಬಾರದ ಕಾರಣ ಅವರ ಅಮ್ಮ ಜಯಶ್ರೀ ಶೆಟ್ಟಿ ಅವರು ಫೋನ್ ಮಾಡಿದ್ದರು. ಆಗ, `ಸ್ನೇಹಿತರ ಜೊತೆ ಇದ್ದೇನೆ. ಆಮೇಲೆ ಬರುತ್ತೇನೆ’ ಎಂದಿದ್ದರು. ಅನೇಕ ಬಾರಿ ಫೋನ್ ಮಾಡಿದರೂ ಅದೇ ಮಾತನ್ನು ಪುನರುಚ್ಚರಿಸಿದ್ದರು.
ಆ ದಿನ ರಾತ್ರಿ 11.30ಕ್ಕೆ ಜಯಶ್ರೀ ಶೆಟ್ಟಿ ಅವರು ಕೊನೆಯದಾಗಿ ಮಗನ ಬಳಿ ಫೋನಿನಲ್ಲಿ ಮಾತನಾಡಿದ್ದರು. ಅದಾದ ನಂತರ ಅನೇಕ ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮರುದಿನ ಶಿರಸಿ ಕೋಟೆಕೆರೆಯಲ್ಲಿ ಮುಖೇಶ ಶೆಟ್ಟಿ ಅವರು ಶವವಾಗಿದ್ದರು. ಜನವರಿ 7ರ ಮಧ್ಯಾಹ್ನ ಈ ವಿಷಯ ಜಯಶ್ರೀ ಶೆಟ್ಟಿ ಅವರಿಗೆ ಗೊತ್ತಾಯಿತು. ಮಗ ಕಾಲು ಜಾರಿ ನೀರಿಗೆ ಬಿದ್ದರಾ? ಅಥವಾ ಆತ್ಮಹತ್ಯೆ ಮಾಡಿಕೊಂಡರಾ? ಎಂದು ಜಯಶ್ರೀ ಶೆಟ್ಟಿ ಅವರಿಗೆ ಗೊತ್ತೇ ಆಗಲಿಲ್ಲ.
`ಈ ಸಾವಿನ ತನಿಖೆ ನಡೆಯಬೇಕು. ಸತ್ಯ ಹೊರಬರಬೇಕು’ ಎಂದು ಜಯಶ್ರೀ ಶೆಟ್ಟಿ ಅವರು ಆಗ್ರಹಿಸಿದರು. ಅವರ ದೂರು ಸ್ವೀಕರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿದರು. ಸಾವಿನ ಬಗ್ಗೆ ತನಿಖೆ ಶುರುವಾಗಿದೆ.