ಭಾರವಾದ ಪಟ್ಟಿ-ಪುಸ್ತಕ ಹೊತ್ತು ಶಾಲೆಗೆ ಹೋಗುವ ಸಮರ್ಥ ನಾಯ್ಕ ಅವರ ಕೈ ಊದಿಕೊಂಡಿದೆ. ತೋಳಿನಲ್ಲಿರುವ ಎಲುಬಿಗೆ ಪೆಟ್ಟು ಬಿದ್ದ ಕಾರಣ ಸಮರ್ಥ ನಾಯ್ಕ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಪಡೆದಿದ್ದಾರೆ.
ಕಾರವಾರದ ಸೆಂಟ್ ಮೈಕಲ್ ಶಾಲೆಯಲ್ಲಿ ಸಮರ್ಥ ನಾಯ್ಕ ಅವರು 6ನೇ ತರಗತಿ ಓದುತ್ತಿದ್ದಾರೆ. ನಿತ್ಯ ಬ್ಯಾಗಿನ ತುಂಬ ಪಟ್ಟಿ-ಪುಸ್ತಕದ ಬಾರ ಹೊತ್ತು ಅವರು ಶಾಲೆಗೆ ಬರುತ್ತಾರೆ. ಶಾಲೆಯ ಬ್ಯಾಗ್ ಬಾರಕ್ಕೆ ಅವರ ಕೈ ಬುಜವೊಂದು ಊದಿಕೊಂಡಿದೆ. ಅದರಿಂದ ಸಮರ್ಥ ನಾಯ್ಕ ಸಾಕಷ್ಟು ನೋವು ಅನುಭವಿಸಿದ್ದು, ಅದನ್ನು ಸಹಿಸಿಕೊಳ್ಳಲಾಗದೇ ಆಸ್ಪತ್ರೆಗೆ ಹೋಗಿದ್ದಾರೆ.
ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿನ ವೈದ್ಯಾಧಿಕಾರಿಗಳು ಬಾಲಕನ್ನು ಪ್ರಶ್ನಿಸಿದ್ದಾರೆ. ಬಾರವಾದ ವಸ್ತು ಎತ್ತಿದ ಬಗ್ಗೆ ಕೇಳಿದಾಗ ಶಾಲಾ ಬ್ಯಾಗ್ ಬಗ್ಗೆ ಬಾಲಕ ಮಾಹಿತಿ ನೀಡಿದ್ದು, ಅಲ್ಲಿದ್ದವರು ಸಹ ಶಾಲೆಯ ಬ್ಯಾಗ್ ತೂಕ ನೋಡಿದ್ದಾರೆ. ವಿದ್ಯಾರ್ಥಿಯ ದೇಹದ ಸಾಮರ್ಥ್ಯಕ್ಕಿಂತಲೂ ಬ್ಯಾಗ್ ಬಾರವಾಗಿರುವುದು ಆಗ ದೃಢವಾಗಿದೆ. ತುರ್ತಾಗಿ ವೈದ್ಯರು ಕೈಗೆ ಚಿಕಿತ್ಸೆ ನೀಡಿದ್ದಾರೆ.
`ಅತಿ ಬಾರದ ಪಠ್ಯದಿಂದ ಮಕ್ಕಳಿಗೆ ಬೆನ್ನು ನೋವು ಶುರುವಾಗುತ್ತಿದೆ. ಅತಿ ಬಾರದ ಪಠ್ಯವನ್ನು ಮಕ್ಕಳಿಂದ ಹೋರಿಸಬಾರದು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧವ ನಾಯಕ ಅವರು ಶಿಕ್ಷಣ ಇಲಾಖೆ ಜಂಟಿ ಆಯುಕ್ತ ಈಶ್ವರ ಉಳಾಗಡ್ಡಿ ಅವರಿಗೆ ಫೋನ್ ಮಾಡಿದ್ದಾರೆ. ಆಗ, `ಆಯಾ ದಿನದ ಶಾಲಾ ಪಠ್ಯಕ್ಕೆ ಸೀಮಿತವಾಗಿರುವ ಪುಸ್ತಕವನ್ನು ಮಾತ್ರ ಮಕ್ಕಳು ತರಬೇಕು. ಅಗತ್ಯವಿರುವುದಕ್ಕಿಂತ ಹೆಚ್ಚಿನ ಪಠ್ಯ ಹೊತ್ತು ತರದಂತೆ ಶಾಲಾ ಆಡಳಿತ ಮಂಡಳಿಯವರು ಕ್ರಮ ಜರುಗಿಸಬೇಕು. ಈ ಬಗ್ಗೆ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಲಾಗುತ್ತದೆ’ ಎಂದು ಈಶ್ವರ ಉಳಾಗಡ್ಡಿ ಅವರು ಹೇಳಿದ್ದಾರೆ.