ಭಟ್ಕಳ ನ್ಯಾಯಾಲಯದ ವಾರೆಂಟ್ ಜಾರಿಗೆ ಮುರುಡೇಶ್ವರಕ್ಕೆ ಹೋಗಿದ್ದ ಕೋರ್ಟಿ ಸಿಬ್ಬಂದಿ ಗಣಪತಿ ನಾಯ್ಕ ಅವರ ಮೇಲೆ ಮಹಮದ್ ಇರ್ಫಾನ್ ಅಬುಕರ್ ಹಜೀಅಮೀನ್ ಅವರು ಕೈ ಮಾಡಿದ್ದಾರೆ. ಅವರ ಅಣ್ಣ ಪಿಯಾನ್ ಅಬುಬಕರ್ ಹಜಿಅಮೀನ್ ಅವರು ಸಹ ಸರ್ಕಾರಿ ಸೇವಕರನ್ನು ನಿಂದಿಸಿದ್ದಾರೆ.
Advertisement. Scroll to continue reading.
ಮಾವಿನಖುರ್ವೆ ಬಂದರು ಬಳಿಯ ತಲಗೋಡು ಸೀತಾರಾಮಮನೆಯಲ್ಲಿ ಗಣಪತಿ ಹನುಮಂತ ನಾಯ್ಕ ಅವರು ವಾಸವಾಗಿದ್ದಾರೆ. ಕಳೆದ 19 ವರ್ಷಗಳಿಂದ ಅವರು ಕೋರ್ಟ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ತಿಂಗಳಿನಿoದ ಅವರು ಭಟ್ಕಳ ಕೋರ್ಟಿಗೆ ನಿಯೋಜನೆಯಾಗಿದ್ದು, ಕೋರ್ಟಿನ ಸೂಚನೆ ಮೇರೆಗೆ ಅವರು ಆರೋಪಿಗಳಿಗೆ ವಾರೆಂಟ್ ಮುಟ್ಟಿಸುತ್ತಿದ್ದಾರೆ.
ಹೀಗಿರುವಾಗ ಜನವರಿ 6ರಂದು ಶ್ರೀರಾಮ ಫೈನಾನ್ಸಿನ ವಂಚನೆ ಪ್ರಕರಣವೊಂದು ಗಣಪತಿ ನಾಯ್ಕ ಅವರ ಎದುರಿಗೆ ಬಂದಿತು. ನ್ಯಾಯಾಲಯದ ಸೂಚನೆ ಪ್ರಕಾರ ಅವರು ಮುರುಡೇಶ್ವರ ಬಳಿಯ ಮಾವಳ್ಳಿ ನ್ಯಾಶನಲ್ ಕಾಲೋನಿಯ ಮಹಮದ್ ಇರ್ಫಾನ್ ಅಬುಕರ್ ಹಜೀಅಮೀನ್ ಅವರಿಗೆ ವಾರೆಂಟ್ ಜಾರಿಗೊಳಿಲು ಮುಂದಾದರು. ಅದಕ್ಕಾಗಿ ಶ್ರೀರಾಮ ಫೈನಾನ್ಸಿನ ಸಿಬ್ಬಂದಿ ರೋಹಿತ ಶೆಟ್ಟಿ ಹಾಗೂ ಗಣೇಶ ನಾಯ್ಕ ಅವರ ಜೊತೆ ಆರೋಪಿ ಮನೆಗೆ ಹೋದರು. ದಸ್ತಗಿರಿ ವಾರೆಂಟ್ ಬಗ್ಗೆ ಅರಿತ ಆರೋಪಿ ಮಹಮದ್ ಸರ್ಕಾರಿ ಸಿಬ್ಬಂದಿ ಗಣಪತಿ ನಾಯ್ಕ ಅವರ ಮೈ ಮೇಲೆ ಕೈ ಹಾಕಿದರು.
ತಮ್ಮ ಅಣ್ಣ ನೂಪಿಯಾನ್ ಅಬುಬಕರ್ ಹಜಿಅಮೀನ್ ಅವರನ್ನು ಮಹಮದ್ ಸ್ಥಳಕ್ಕೆ ಕರೆದು ವಾರೆಂಟ್ ನೀಡಲು ಬಂದವರನ್ನು ಬೆದರಿಸಿದರು. `ಇಲ್ಲಿ ಏಕೆ ಬಂದಿದ್ದೀರಿ. ಇಂತ ಹಲವು ವಾರೆಂಟ್ ನಾನು ನೋಡಿದ್ದೇನೆ. ನಿಮಗೆ ಏನು ಮಾಡಬೇಕು ಎಂದು ಗೊತ್ತು’ ಎಂದು ಅವರಿಬ್ಬರು ಸೇರಿ ಬೆದರಿಕೆ ಹಾಕಿದರು. ಫೈನಾನ್ಸ ಸಿಬ್ಬಂದಿಗೆ ಸಹ ಕೆಟ್ಟದಾಗಿ ನಿಂದಿಸಿದರು. ಈ ವಿಷಯದ ಬಗ್ಗೆ ಹನುಮಂತ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಮುರುಡೇಶ್ವರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.