ಗೋಕರ್ಣ ಕಡಲ ತೀರಕ್ಕೆ ಬಂದಿದ್ದ ಮೈಸೂರಿನ ಮಧು ಆಳ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಇದನ್ನು ನೋಡಿದ ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ಮರೆತು ಪ್ರವಾಸಿಗನ ಜೀವ ಕಾಪಾಡಿದ್ದಾರೆ.
10 ಜನ ಸ್ನೇಹಿತರ ಜೊತೆ ಮಧು ಗೋಕರ್ಣಕ್ಕೆ ಬಂದಿದ್ದರು. ಭಾನುವಾರ ಬೆಳಗ್ಗೆ ಅವರು ಕಡಲ ತೀರವನ್ನು ಪ್ರವೇಶಿಸಿದ್ದು, ಈಜು ಬಾರದಿದ್ದರು ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಮಧು ಅವರು ಕೊಚ್ಚಿ ಹೋದರು. ಇದನ್ನು ನೋಡಿದ ಜೀವ ರಕ್ಷಕ ಸಿಬ್ಬಂದಿ ಮೋಹನ ಅಂಬಿಗ ಅವರು ಅಲ್ಲಿದ್ದ ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ ಹಾಗೂ ರೋಷನ್ ಖಾರ್ವಿ ಅವರನ್ನು ಕೂಗಿ ಕರೆದರು. ಈ ಎಲ್ಲರೂ ಸೇರಿ ಸಮುದ್ರಕ್ಕೆ ಹಾರಿ ಮಧು ಅವರ ಜೀವ ಕಾಪಾಡಿದರು.
ಕಡಲ ತೀರದ ಸಿಬ್ಬಂದಿ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಜೊತೆ ಜಸ್ಕಿ ಚಾಲಕ ದರ್ಶನ್ ಲಕ್ಕುಮನೆ, ಜಗ್ಗು ಹೊಸ್ಕಟ್ಟ, ದೀಪಕ್ ಗೌಡ, ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸಕಟ್ಟ, ಮಹೇಶ್ ಹೊಸ್ಕಟ್ಟ, ಸಚಿನ್ ಹೊಸ್ಕಟ್ಟ ಸಹ ಕಾರ್ಯಾಚರಣೆಯಲ್ಲಿದ್ದರು. ಸಮುದ್ರದ ಅಪಾಯದ ಬಗ್ಗೆ ಅವರೆಲ್ಲರೂ ಪ್ರವಾಸಿಗರಿಗೆ ವಿವರಿಸಿದರು.