ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಕೆಲ ಕಾಂಗ್ರೆಸ್ ಶಾಸಕರ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. `ಶಾಸಕರ ವಿದೇಶ ಪ್ರವಾಸದ ಕುರಿತು ಅವರು ಮರಳಿದ ನಂತರ ಪ್ರಶ್ನಿಸಲಾಗುತ್ತದೆ. ಅಲ್ಲಿಯವರೆಗೆ ಸುಮ್ಮನಿದ್ದರೆ ಒಳಿತು’ ಎಂದವರು ಹೇಳಿದ್ದಾರೆ.
ಈಚೆಗೆ ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಶಾಸಕರ ವಿದೇಶ ಪ್ರವಾಸದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದರು. `ಹೆಚ್ಚು ದುಡ್ಡಿದ್ದವರು ಎಲ್ಲಾ ಕಡೆ ಹೋಗುತ್ತಾರೆ’ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳ ಮೋಜಿನ ಪ್ರವಾಸದ ಬಗ್ಗೆ ವ್ಯಂಗ್ಯವಾಡಿದ್ದರು. ಅದರೊಂದಿಗೆ ಶಾಸಕ ಇಕ್ಬಾಲ್ ಹುಸೇನ್ ಸೇರಿ ಅನೇಕರು ವಿದೇಶಿ ಪ್ರವಾಸದ ಬಗ್ಗೆ ಮಾತನಾಡಿದ್ದರು. ರವಿ ಗಾಣಿಗ, ಶಿವಗಂಗ ಬಸವರಾಜ ಅವರು ಸಹ ವಿದೇಶಿ ಪ್ರವಾಸದ ಬಗ್ಗೆ ಅಸಮಧಾನದ ಮಾತನಾಡಿದ್ದರು.
ಈ ಎಲ್ಲಾ ಹಿನ್ನಲೆ ಕಾರವಾರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ ಅವರು `ವಿದೇಶ ಪ್ರವಾಸಕ್ಕೆ ಹೋದವರು ನಮ್ಮವರೇ. ಅವರು ಮರಳಿದ ನಂತರ ಏಕೆ ಹೋಗಿದ್ದರು? ಎನ್ನುವ ಬಗ್ಗೆ ಪ್ರಶ್ನಿಸುವೆ. ಅಲ್ಲಿಯವರೆಗೆ ಈ ಎಲ್ಲರೂ ಸುಮ್ಮನಿದ್ದರೆ ಅದೇ ನನಗೆ ಸಮಾಧಾನ’ ಎಂದು ಹೇಳಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ಅನಗತ್ಯವಾಗಿ ಇಲ್ಲಸಲ್ಲದ ವಿಷಯದ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಉಪಮುಖ್ಯಮಂತ್ರಿಗಳು ಅಸಮಧಾನವ್ಯಕ್ತಪಡಿಸಿದ್ದಾರೆ.