ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ ನಡೆದಿದ್ದು, ಇದಕ್ಕೆ ಪೂರಕವಾಗಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯ ಬ್ಯಾನರಿನಲ್ಲಿ ಅವರ ಭಾವಚಿತ್ರ ಕಾಣಿಸಿದೆ. ಆದರೆ, ಕಾರ್ಯಕ್ರಮದಲ್ಲಿ ಎಲ್ಲಿಯೂ ಅವರ ಹೆಸರು ಪ್ರಸ್ತಾಪ ಆಗಿಲ್ಲ.
ಈ ಕಾರ್ಯಕಾರಣಿ ಸಭೆಯಲ್ಲಿ ಅನಂತಕುಮಾರ ಹೆಗಡೆ ಸೇರಿ ಅನೇಕ ನಾಯಕರು ಗೈರಾಗಿದ್ದರು. ಆದರೆ, ಸ್ವಾಗತ ಭಾಷಣ ಮಾಡಿದರು ಗೈರಾದವರ ಹೆಸರನ್ನು ಸೇರಿಸಿ ಸ್ವಾಗತಿಸಿದರಾದರೂ ಅನಂತಕುಮಾರ ಹೆಗಡೆ ಅವರನ್ನು ಸ್ವಾಗತಿಸುವವರಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರ ಸೇವೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಗಿದ್ದರೂ ಅನಂತಕುಮಾರ ಹೆಗಡೆ ಅವರ ವಿಷಯ ಮುನ್ನೆಲೆಗೆ ಬಂದಿಲ್ಲ. ವೇದಿಕೆ ಮೇಲೆ ಅಂಟಿಸಿದ ಬ್ಯಾನರಿನಲ್ಲಿ ಕಾಣಿಸುತ್ತಿದ್ದ ಅನಂತಕುಮಾರ ಹೆಗಡೆ ಅವರ ಹೆಸರನ್ನು ಮುಖ್ಯ ಭಾಷಣಕಾರರು ಪ್ರಸ್ತಾಪಿಸಲಿಲ್ಲ. ಅವರು ಮತ್ತೆ ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗುವ ಬಗ್ಗೆ ಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆಯೂ ನಡೆಯಲಿಲ್ಲ. ಅನಂತಕುಮಾರ ಹೆಗಡೆ ಅವರ ಬೆಂಬಲಿಕರು ಈ ಕಾರ್ಯಕ್ರಮದಲ್ಲಿದ್ದರೂ ಅವರು ಆ ಬಗ್ಗೆ ಯಾವುದೇ ರೀತಿಯಲ್ಲಿಯೂ ಮಾತನಾಡಲಿಲ್ಲ.
ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ವಂಚಿತರಾದ ಅನಂತಕುಮಾರ ಹೆಗಡೆ ಅವರು ಅದಾದ ನಂತರ ಪಕ್ಷ ಸಂಘಟನೆಗೂ ಬಂದಿಲ್ಲ. ಬಿಜೆಪಿಯ ಯಾವ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿಲ್ಲ. ಬಿಜೆಪಿ ನಾಯಕರ ಜೊತೆಯೂ ಅವರು ಕಾಣಿಸಿಕೊಂಡಿಲ್ಲ. ಬಿಜೆಪಿ ನಡೆಸಿಕೊಂಡ ರೀತಿಗೆ ಅನಂತಕುಮಾರ ಹೆಗಡೆ ಅವರು ಮುನಿಸಿಕೊಂಡಿದ್ದು, ಸದ್ಯ ಸಂಘ ಪರಿವಾರದವರು ಅನಂತಕುಮಾರ ಹೆಗಡೆ ಅವರ ಮನವೋಲೈಕೆ ಪ್ರಯತ್ನ ಮಾಡಿದ್ದಾರೆ. ಈ ಎಲ್ಲದರ ನಡುವೆ ಯಲ್ಲಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಗೆ ಅನಂತಕುಮಾರ ಹೆಗಡೆ ಅವರು ಹಾಜರಾಗದಿದ್ದರೂ ಬ್ಯಾನರಿನಲ್ಲಿ ಅವರ ಪೋಟೋ ಕಾಣಿಸಿದೆ.
ಅನಂತಕುಮಾರ ಹೆಗಡೆ ಅವರು ಬಿಜೆಪಿ ಪಕ್ಷ ಸಂಘಟನೆಗೆ ಬಾರದೇ ಇದ್ದರೂ ಬಿಜೆಪಿಗೆ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಅನಂತಕುಮಾರ ಹೆಗಡೆ ಅವರ ಫೋಟೋ ಬಳಸಿಕೊಂಡಿರುವ ಬಗ್ಗೆ ಮಾತು ಕೇಳಿ ಬಂದಿದೆ. ಆದರೆ. ಅನಂತಕುಮಾರ ಹೆಗಡೆ ಅವರ ಫೋಟೋ ಬಳಸಿಕೊಂಡ ಬಿಜೆಪಿಗರು ಪಕ್ಷದ ಆಂತರಿಕ ಸಭೆಯಲ್ಲಿ ಅವರನ್ನು ಬಳಸಿಕೊಂಡು ಮತ್ತೆ ಪಕ್ಷ ಸಂಘಟನೆ ಮಾಡುವ ಬಗ್ಗೆ ಚಿಂತಿಸದಿರುವ ಬಗ್ಗೆಯೂ ಮತ್ತೊಂದು ಚರ್ಚೆ ಶುರುವಾಗಿದೆ. ಈ ಎಲ್ಲದರ ನಡುವೆ ಮಾರ್ಚ 8ರಂದು ಭಟ್ಕಳದಲ್ಲಿ ನಡೆಯಲಿರುವ `ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತಕುಮಾರ ಹೆಗಡೆ ಅವರು ದಿಕ್ಸೂಚಿ ಭಾಷಣ ಮಾಡಲು ಒಪ್ಪಿಕೊಂಡಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ `ಅನಂತಕುಮಾರ ಹೆಗಡೆ ಅವರು ನಮ್ಮ ಜೊತೆಗೆ ಇದ್ದಾರೆ’ ಎಂದು ಹೇಳಿದ್ದಾರೆ.
ಹೀಗಾಗಿ ಅನಂತಕುಮಾರ ಹೆಗಡೆ ಅವರು ಸಕ್ರೀಯ ರಾಜಕಾರಣಕ್ಕೆ ಬರುವ ವದಂತಿಗೆ ಇನ್ನಷ್ಟು ಭಲ ಬಂದಿದೆ. ಆದರೆ, ಅನಂತಕುಮಾರ ಹೆಗಡೆ ಅವರು ಮಾತ್ರ ಈವರೆಗೆ ಸಕ್ರೀಯ ರಾಜಕಾರಣಕ್ಕೆ ಮರಳುವ ಬಗ್ಗೆ ಮಾತನಾಡಿಲ್ಲ. ತಮ್ಮ ಕುರಿತು ಹರಿದಾಡುವ ಯಾವ ವರದಿಗೂ ಅವರು ಪ್ರತಿಕ್ರಿಯಿಸಿಲ್ಲ. ಬಿಜೆಪಿ ಪ್ರಮುಖರು ಸಹ ಬ್ಯಾನರಿನಲ್ಲಿ ಅನಂತಕುಮಾರ ಹೆಗಡೆ ಅವರ ಪೋಟೋ ಹಾಕಿದ್ದು ಬಿಟ್ಟರೆ ಭಾಷಣದಲ್ಲಿಯೂ ಅವರ ಹೆಸರು ಹೇಳುತ್ತಿಲ್ಲ.