ಭಟ್ಕಳದ ಕಿತ್ರೆ ಕ್ರಾಸ್ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಒಟ್ಟು ನಾಲ್ಕು ಜನ ಗಾಯಗೊಂಡಿದ್ದಾರೆ.
ಫೆಬ್ರವರಿ 22ರ ಮಧ್ಯಾಹ್ನ ಈ ಅಪಘಾತ ನಡೆದಿದೆ. ಭಟ್ಕಳದಿಂದ ಕುಂಟವಾಣಿಗೆ ತೆರಳುತ್ತಿದ್ದ ಕುಂಟವಾಣಿಯ ಗುಡಿಹಿತ್ಲುವಿನ ಕೃಷಿಕ ಮಂಜುನಾಥ ಶೇಷಾ ಶೆಟ್ಟಿ (52) ಹಾಗೂ ತಲಾಂದದ ಕೂಲಿ ಕಾರ್ಮಿಕ ವಿಜಯ ನಾರಾಯಣ ಗೊಂಡ (28) ಅವರು ಓಡಿಸುತ್ತಿದ್ದ ಬೈಕು ಮುಖಾಮುಖಿಯಾಗಿದೆ. ಎರಡು ಬೈಕಿನ ವೇಗ ಹೆಚ್ಚಾಗಿದ್ದ ಕಾರಣ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ವಿಜಯ ಗೊಂಡ ಅವರ ಬೈಕಿನಲ್ಲಿ ಕುಳಿತಿದ್ದ ತಲಾಂದ ಗ್ರಾಮದ ಕೂಲಿ ಕಾರ್ಮಿಕ ಕಿರಣ ಹನುಮಂತ ನಾಯ್ಕ (26) ಮತ್ತು ಮಂಜುನಾಥ ಶೆಟ್ಟಿ ಬೈಕಿನಲ್ಲಿದ್ದ ಅವರ ಮಗಳು ಭೂಮಿಕಾ (19) ಅವರಿಗೂ ಈ ಅಪಘಾತದಲ್ಲಿ ನೋವಾಗಿದೆ.
ಮಂಜುನಾಥ ಶೆಟ್ಟಿಯವರ ಎಡ ಕೈ ಮತ್ತು ತುಟಿಗೆ ಹಾಗೂ ಅವರ ಮಗಳಿಗೆ ಬಲ ಕೈ ಕಿರು ಬೆರಳಿಗೆ ಗಾಯಗಳಾಗಿವೆ. ವಿಜಯ ಗೊಂಡ ಅವರಿಗೆ ತಲೆಗೆ, ಬಲಗೆನ್ನೆಗೆ, ಮೂಗು, ತುಟಿ ಮತ್ತು ಬಲ ಕಣ್ಣಿನ ಹತ್ತಿರ ಗಾಯಗಳಾಗಿವೆ. ಕಿರಣ ನಾಯ್ಕ ಅವರ ಬಲ ಕಾಲಿನ ಪಾದದ ಹತ್ತಿರ ಪೆಟ್ಟಾಗಿದೆ. ವಿಜಯ ಗೊಂಡ ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರಿಂದ ಅಪಘಾತ ನಡೆದಿದೆ ಎಂದು ಮಂಜುನಾಥ ಶೆಟ್ಟಿ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ತಪ್ಪದೇ ಪಾಲಿಸಿ’