ಕಾರವಾರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುವ ಸಂಪತ್ ರೋಣದ್ ಅವರು 28ನೇ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದಾರೆ. ದುಶ್ಚಟಕ್ಕೆ ದಾಸರಾಗಿರುವ ಅವರು ನಶೆಯ ಗುಂಗಿನಲ್ಲಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿಯೂ ಅವರು ನಿಷೇಧಿತ ಗಾಂಜಾ ಸೇವಿಸಿರುವುದು ದೃಢವಾಗಿದೆ.
ಕಾರವಾರದ ಗುತ್ತಿಬೀರ ದೇವಸ್ಥಾನದ ಬಳಿ ಸಂಪತ್ ಮಾದಪ್ಪ ರೋಣದ್ ಅವರು ವಾಸವಾಗಿದ್ದಾರೆ. ತರಕಾರಿ ವ್ಯಾಪಾರ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ. ಆದರೆ, ಸಹವಾಸ ದೋಷ ಅವರ ಬದುಕನ್ನು ಹಾಳು ಮಾಡಿದೆ. ಮೋಜು-ಮಸ್ತಿಯ ವ್ಯಾಮೋಹಕ್ಕೆ ಬಿದ್ದ ಸಂಪತ್ ರೋಣದ್ ಅವರು ಅಮಲು ಪದಾರ್ಥಗಳ ಹಿಂದೆ ಬಿದ್ದಿದ್ದಾರೆ. ಕಡಲತೀರ ಬಳಿಯ ಹನುಮಾನ್ ಮೂರ್ತಿ ಬಳಿ ತೆರಳಿ ಸಂಪತ್ ರೋಣದ್ ಅವರು ಗಾಂಜಾ ಸೇವಿಸುತ್ತಿದ್ದು, ಆ ವೇಳೆಯಲ್ಲಿಯೇ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.
ಫೆಬ್ರವರಿ 28ರ ಮಧ್ಯಾಹ್ನ ಸಂಪತ್ ರೋಣದ್ ಅವರು ತಮ್ಮ ತರಕಾರಿ ವ್ಯಾಪಾರ ಬಿಟ್ಟು ಕಡಲತೀರಕ್ಕೆ ಹೋಗಿದ್ದರು. ಕಿಸೆಯಲ್ಲಿದ್ದ ಕಾಸಿನಿಂದ ಅವರು ಗಾಂಜಾ ಖರೀದಿಸಿ ಅದನ್ನು ಸೇವಿಸಿದ್ದರು. ಅಮಲಿನಲ್ಲಿ ಅಲೆದಾಡುತ್ತಿದ್ದ ಅವರು ಅಪಾಯಕ್ಕೆ ಸಿಲುಕಿದ್ದು, ಅನುಮಾನಾಸ್ಪದ ವರ್ತನೆ ನೋಡಿ ಕಾರವಾರ ಶಹರ ಪಿಸೈ ಉದ್ದಪ್ಪ ದರೆಪ್ಪನವರ್ ಅವರು ಸಂಪತ್ ರೋಣದ್ ಅವರನ್ನು ಮಾತನಾಡಿಸಿದರು. ಆ ವೇಳೆ ಸಂಪತ್ ರೋಣದ್ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ತೊದಲುತ್ತಿದ್ದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು.
ತಪಾಸಣೆ ನಡೆಸಿದ ವೈದ್ಯರು ಸಂಪತ್ ರೋಣದ್ ಅವರು ಅಮಲಿನಲ್ಲಿರುವುದನ್ನು ಖಚಿತಪಡಿಸಿದರು. ವೈದ್ಯರು ನೀಡಿದ ವರದಿಯಲ್ಲಿಯೂ ಗಾಂಜಾ ಸೇವನೆ ದೃಢವಾಯಿತು. ಈ ಹಿನ್ನಲೆ ಪೊಲೀಸರು ಸಂಪತ್ ರೋಣದ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. ಗಾಂಜಾ ಸೇವನೆಯ ದುಷ್ಪರಿಣಾಮಗಳ ವಿರುದ್ಧವೂ ಅರಿವು ಮೂಡಿಸಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’