ಅಂಕೋಲಾ ಬೇಲೆಕೆರೆಯ ಕರಿದೇವರ ದೇವಸ್ಥಾನ ಆವರಣದಲ್ಲಿ ಹೋಳಿ ಹಬ್ಬದ ಸಭೆ ನಡೆದಿದ್ದು, ಈ ಸಭೆಯಲ್ಲಿ ಹೊಡೆದಾಟ ನಡೆದಿದೆ. ಸಭೆಗೆ ಬಂದಿದ್ದ ಸಚಿನ್ ಅಸ್ನೋಟಿಕರ್ ಅವರ ಮೇಲೆ ಮಣಿಕಂಠ ಕುಡ್ತಳಕರ್ ಹಾಗೂ ಅಮೀತ ಕುಡ್ತಳಕರ್ ಅವರು ಕೈ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ.
Advertisement. Scroll to continue reading.
ಅಂಕೋಲಾ ಬೇಲೆಕೆರೆಯಲ್ಲಿ ಸಚಿನ್ ರಾಧಾಕೃಷ್ಣ ಅಸ್ನೋಟಿಕರ್ ಅವರು ವಾಸವಾಗಿದ್ದಾರೆ. ವ್ಯಾಪಾರಿಯಾಗಿ ಅವರು ತಮ್ಮ ಜೀವನ ನಡೆಸುತ್ತಿದ್ದು, ಬಂದರಿಗೆ ಹೋಗಿ ಅವರು ಮೀನುಗಳನ್ನು ಸಹ ಖರೀದಿಸುತ್ತಾರೆ. ಆದರೆ, ಸಚಿನ್ ಅಸ್ನೋಟಿಕರ್ ಅವರು ಬಂದರಿಗೆ ಬಂದು ಮೀನು ಖರೀದಿಸುವುದನ್ನು ಬೇಲೆಕೆರೆಯ ಮಣಿಕಂಠ ಸುರೇಶ ಕುಡ್ತಳಕರ್ ಹಾಗೂ ಅಮೀತ ಕಾಂತ ಕುಡ್ತಳಕರ್ ಅವರು ವಿರೋಧಿಸಿದ್ದು, ಅದಾಗಿಯೂ ಸಚಿನ್ ಅಸ್ನೋಟಿಕರ್ ಅವರು ಮೀನು ಖರೀದಿ ಬಿಟ್ಟಿಲ್ಲ. ಇದೇ ವಿಷಯಕ್ಕೆ ಮಾರ್ಚ 1ರಂದು ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಹೊಡೆದಾಟ ನಡೆದಿದೆ.
ಆ ದಿನ ಸಂಜೆ ಅಂಕೋಲಾ ಬೇಲೆಕೆರೆಯ ಕರಿದೇವರ ದೇವಸ್ಥಾನ ಆವರಣದಲ್ಲಿ ಹೋಳಿ ಹಬ್ಬದ ಪೂರ್ವಭಾವಿ ಸಭೆ ನಡೆದಿತ್ತು. ಸಚಿನ್ ಅಸ್ನೋಟಿಕರ್ ಅವರು ಆ ಸಭೆಯಲ್ಲಿದ್ದರು. ಅಲ್ಲಿಗೆ ಧಾವಿಸಿದ ಮಣಿಕಂಠ ಕುಡ್ತಳಕರ್ ಹಾಗೂ ಅಮಿತ ಕುಡ್ತಳಕರ್ ಅವರು ಏಕಾಏಕಿ ಸಚಿನ್ ಅಸ್ನೋಟಿಕರ್ ಅವರ ಕೊರಳಪಟ್ಟಿ ಹಿಡಿದರು. ಸಚಿನ್ ಅಸ್ನೋಟಿಕರ್ ಅವರ ಕೆನ್ನೆಗೆ ಬಾರಿಸಿದರು. ಜೊತೆಗೆ ಸಚಿನ್ ಅಸ್ನೋಟಿಕರ್ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತುಂಡರಿಸಿದರು. ಇದನ್ನು ನೋಡಿದ ಗುರುದಾಸ ಭಾನಾವಳಿಕರ್ ಅವರು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಮಣಿಕಂಠ ಕುಡ್ತಳಕರ್ ಹಾಗೂ ಅಮಿತ ಕುಡ್ತಳಕರ್ ಅವರು ಗುರುದಾಸ ಭಾನಾವಳಿಕರ್ ಅವರ ಮೇಲೆಯೂ ಕೈ ಮಾಡಿದರು. ಹೊಡೆದಾಟ ತಪ್ಪಿಸಲು ಬಂದ ಗುರುದಾಸ ಅವರ ಪುತ್ರ ಸೂರಜ ಭಾನಾವಳಿಕರ್ ಅವರ ಮೇಲೆಯೂ ದಬ್ಬಾಳಿಕೆ ನಡೆಸಿದರು.
`ಬಂದರಿನಲ್ಲಿ ಕಾಣಿಸಿಕೊಂಡರೆ ಮತ್ತೆ ಹೊಡೆಯುವೆ’ ಎಂದು ಅವರಿಬ್ಬರು ಸಚಿನ್ ಅಸ್ನೋಟಿಕರ್ ಅವರಿಗೆ ಬೆದರಿಕೆ ಒಡ್ಡಿದರು. `ಹೋಳಿ ಹಬ್ಬದಲ್ಲಿ ಕಾಣಿಸಿದರೂ ಜೀವ ತೆಗೆಯುವೆ’ ಎಂದು ಹೆದರಿಸಿದರು. ಈ ಬಗ್ಗೆ ಸಚಿನ್ ಅಸ್ನೋಟಿಕರ್ ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದರು.