ಅಪ್ರಾಪ್ತರಿಗೆ ಅಮಲು ಪದಾರ್ಥ ನೀಡಿ ವಿದ್ವಂಸಕ ಕೃತ್ಯ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಸಿದ್ದಿಕ್ ರಹಮಾನ್ ಅವರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬೈಲೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಹದಿಹರಿಯದವರಿಗೆ ಗಾಂಜಾ ಪೂರೈಕೆ ಮಾಡಿದ ಆರೋಪ ಸಿದ್ದಿಕ್ ರಹಮಾನ್ ಅವರ ಮೇಲಿದ್ದು, ಈ ಕುರಿತು ತನಿಖೆ ಚುರುಕುಗೊಂಡಿದೆ.
ಫೆಬ್ರವರಿ 23ರಂದು ಭಟ್ಕಳದ ಬೈಲೂರಿನಲ್ಲಿ ಏಳು ಜನ ಮುಸ್ಲೀಂ ಸಮುದಾಯದ ಬಾಲಕರು ಸೇರಿ ಹಿಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಬೈಕಿನಲ್ಲಿ ಗುಂಪು ಗುಂಪಾಗಿ ಆಗಮಿಸಿದ ಮಕ್ಕಳು ಮನೆಗಳ ಮೇಲೆ ಕಲ್ಲು ಎಸೆಯುತ್ತಿದ್ದು, ಪ್ರಶ್ನಿಸಿದವರನ್ನು ಕೆಟ್ಟದಾಗಿ ನಿಂದಿಸಿದ್ದರು. ಮುರುಡೇಶ್ವರ ಬಸ್ತಿಮಕ್ಕಿಯ ಇಬ್ರಾಹಿಂ ಇಹಾಲ್ ಅವರು ತಮ್ಮ ಸಹಚರರಾದ ನ್ಯಾಶನಲ್ ಕಾಲೋನಿಯ ಅಬ್ಬಾಸ್ ಹಜೀಬ್, ಹಮ್ಮಾ ಕಾಲೋನಿಯ ರಯಾನ್ ಫರಾಸ್, ಜಮೀಲಾ ಮಸೀದ್ ಬಳಿಯ ನಶ್ವಾಲ್ ಗೈಮಾ, ಮಹಮದ್ ರ‍್ಜಾನ್, ಬಸ್ತಿಮಕ್ಕಿಯ ಅಪ್ಪಾನ್ ಆರೀಪ್, ರಿಯಾಜ್ ತಿರುವಳ್ಳಿ ಜೊತೆ ಸೇರಿ ಈ ಕಿಡಿಗೇಡಿ ಕೆಲಸ ಮಾಡಿದ್ದರು. ಬೈಲೂರು ಮಾರ್ಕಂಡೇಶ್ವರದ ಸಮೀಪದ ದಿನಕರ ನಾಯ್ಕ ಮಹೇಶ ದೇವಾಡಿಗ ಹಾಗೂ ರವೀಂದ್ರ ಪೈ ಅವರ ಮನೆ ಮೇಲೆ ಕಲ್ಲು ತೂರಿದ್ದರು. ಅದಾದ ನಂತರ ಮಡಿಕೇರಿ ರಸ್ತೆಯ ಕಡೆಯಿದ್ದ ಶಶಾಂಕ ನಾಯ್ಕ, ನಾಗರಾಜ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರ ಮನೆಯ ಕಡೆಗೂ ಕಲ್ಲು ಎಸೆದಿದ್ದರು.
ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯೇ ಮುರ್ಡೇಶ್ವರ ಪೊಲೀಸ್ ಠಾಣೆ ಎದುರು ಜಮಾಯಿಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದು, ಪೊಲೀಸರು ಆ ಎಲ್ಲಾ ಅಪ್ರಾಪ್ತರನ್ನು ವಶಕ್ಕೆಪಡೆದಿದ್ದರು. ವಿಚಾರಣೆ ವೇಳೆ ಅವರೆಲ್ಲರೂ ಅಮಲಿನಲ್ಲಿರುವುದು ಗೊತ್ತಾಗಿದೆ. ಕೋಮುಗಳ ನಡುವೆ ಅಸೌಹಾರ್ದತೆ ಮೂಡಿಸಲು ಪಡ್ಡೆ ಹುಡುಗರು ಈ ಕೃತ್ಯ ನಡೆಸಿದ ಅನುಮಾನವ್ಯಕ್ತವಾಗಿದ್ದು, ತನಿಖೆ ಮುಂದುವರೆಸಿದಾಗ ಅವರಿಗೆ ಗಾಂಜಾ ಪೂರೈಕೆ ಮಾಡಿದ್ದ ಭಟ್ಕಳದ ಕಾರಗದ್ದೆ 2ನೇ ಕ್ರಾಸಿನ ಸಿದ್ದಿಕ್ ಅಬ್ದುಲ್ ರೆಹಮಾನ್ ಅವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರು ದಾಳಿ ಮಾಡಿದಾಗ ಸಿದ್ದಿಕ್ ಅಬ್ದುಲ್ ರೆಹಮಾನ್ ಅವರ ಬಳಿ ಇ-ಸಿಗರೇಟ್ ಪ್ಯಾಕೇಟ್ ಸಿಕ್ಕಿದೆ. ಒಂಭತ್ತು ರೀಫಿಲ್ ಕಾರ್ಟ್ರಿಡ್ಜ್’ನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಮುರ್ಡೇಶ್ವರ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ್ ಅವರ ನೇತೃತ್ವದಲ್ಲಿ ಆರೋಪಿ ಬಂಧನ ನಡೆದಿದ್ದು, ಮಾರ್ಚ 13ರರವರೆಗೆ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನವಿಧಿಸಿದೆ.