`ಪ್ರತಿಯೊಬ್ಬ ಮಕ್ಕಳು ವಿಜ್ಞಾನದ ಬಗ್ಗೆ ಅರಿಯಬೇಕು’ ಎಂದು ಕಾರವಾರದ ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಶುಭ ನಾಯಕ ಅವರು ಹೇಳಿದ್ದಾರೆ. `ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಕಲಿಕೆ ಅತೀ ಅಗತ್ಯವಾಗಿದ್ದು, ವಿಜ್ಞಾನ ಅರಿತರೆ ಗಣಿತ ಸಹ ಸುಲಭವಾಗುತ್ತದೆ’ ಎಂದವರು ವಿವರಿಸಿದ್ದಾರೆ.
Advertisement. Scroll to continue reading.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಜನತಾ ವಿದ್ಯಾಲಯ ಪ್ರೌಢಶಾಲೆಯ ಕಡಲು ಇಕೋ ಕ್ಲಬ್ ಆಶ್ರಯದಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ಸಿವಿ ರಾಮನ್ ರವರ ಕುರಿತ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಈ ವೇಳೆ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿದ್ದಾರೆ. `ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ವಿಜ್ಞಾನ ಕಲಿಕೆಯ ಜೊತೆಗೆ ನಿಜ ಜೀವನ ವಿಜ್ಞಾನವನ್ನು ಅರಿತುಕೊಳ್ಳುವುದು ಮುಖ್ಯ. ಹೃದಯ ವಿಜ್ಞಾನವಾದರೆ ಹೃದಯದ ಬಡಿತಗಳ ಸಂಖ್ಯೆ ಗಣಿತವಾಗುತ್ತದೆ’ ಎಂದವರು ಹೇಳಿದ್ದಾರೆ. `ಸರ್ ಸಿ ವಿ ರಾಮನ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ನಿರಂತರ ಗುರಿಯಿಂದ ಅವರು ಸಾಧನೆ ಮಾಡಿದರು. ಮಕ್ಕಳಿಗೆ ಅವರು ಮಾದರಿ ಆಗಿರಬೇಕು’ ಎಂದವರು ಕರೆ ನೀಡಿದ್ದಾರೆ.
`ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಆನ್‌ಲೈನ್ ರಸಪ್ರಶ್ನೆಯಂತಹ ತಂತ್ರಜ್ಞಾನದ ಆಧಾರಿತ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಯತ್ನಿಸಿದೆ’ ಎಂದು ಶ್ಲಾಘಿಸಿದರು. ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಂಕೋಲಾದ ಪಿಎಮ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕೀರ್ತಿ ಗೋವಿಂದ ನಾಯ್ಕ, ದ್ವಿತೀಯ ಸ್ಥಾನ ಪಡೆದ ಜನತಾ ವಿದ್ಯಾಲಯ ಮದುಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಿ ದುರ್ಗೆಕರ್, ತೃತೀಯ ಬಹುಮಾನ ಪಡೆದ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ಮೃತಿ ಸುರೇಶ್ ದುರ್ಗೇಕರ್ ಅವರಿಗೆ ಬಹುಮಾನ ವಿತರಿಸಿದರು. 10 ಸಮಾಧಾನಕರ ಬಹುಮಾನಗಳನ್ನು ನೀಡಿದರು.
ಶಾಲಾ ಮುಖ್ಯಾಧ್ಯಾಪಕಿ ವೀಣಾ ಮಾಳಿಗೆ, ಆದರ್ಶ ವಿದ್ಯಾಲಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಪೂರ್ಣಿಮಾ ನಾಯ್ಕ್, ಬಾಲ ಮಂದಿರ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಭಾರತಿ ಐಸಾಕ್. ಎಜುಕೇರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಟೀನಾ ಅಸ್ನೋಟಿಕರ ಇದ್ದರು. ಶಿಕ್ಷಕರಾದ ಸ್ಮಿತಾ ಗೋವಿಂದ ನಾಯ್ಕ್, ನಿಕಿತಾ ನಾಯ್ಕ್, ಜೈ ರಂಗನಾಥ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು.