ಕೆಲ ತಿಂಗಳ ಹಿಂದೆ ಕಾರವಾರ ಕಾರಾಗೃಹದಲ್ಲಿ ಗಾಂಜಾ – ಮೊಬೈಲ್ ಸೇರಿ ವಿವಿಧ ನಿಷೇಧಿತ ವಸ್ತು ಪತ್ತೆಯಾಗಿದ್ದು, ಅದರ ಬೆನ್ನಲ್ಲೆ ಮತ್ತೆ ಜೈಲಿನ ಒಳಗೆ ಮಾದಕ ವಸ್ತು ಸಾಗಿಸುವ ಪ್ರಯತ್ನ ನಡೆದಿದೆ. ಕಾರಾಗೃಹದಲ್ಲಿರುವ ಕೈದಿಗಳನ್ನು ಭೇಟಿಯಾಗಲು ಬರುವ ಇಬ್ಬರು ಜೈಲಿನ ಒಳಗೆ ಮಾದಕ ವಸ್ತು ಸಾಗಾಟ ಪ್ರಯತ್ನ ನಡೆಸಿದ್ದಾರೆ.
ಕಾರವಾರ ಕಾರಾಗೃಹದಲ್ಲಿ ಮಹಮದ್ ಮಂಜೂರ್ ಅಬ್ದುಲ್ ಕರೀಂ ಎಂಬಾತರು ಜೈಲುವಾಸ ಅನುಭವಿಸುತ್ತಿದ್ದು, ಅವರನ್ನು ಭೇಟಿ ಆಗಲು ಬಂದವರಿಬ್ಬರು ನಿಷೇಧಿತ ವಸ್ತು ಸಾಗಾಟಕ್ಕೆ ಪ್ರಯತ್ನಿಸಿದ್ದಾರೆ. ಮಾರ್ಚ 4ರ ಸಂಜೆ 5 ಗಂಟೆಗೆ ಭಟ್ಕಳದ ಹನಿಫಾದಿಂದ ಕಾರವಾರಕ್ಕೆ ಬಂದಿದ್ದ ಮೊಹಮದ್ ಅಲಿ ಅಬ್ದುಲ್ ಕರಿ ಹಾಗೂ ಅವರ ಜೊತೆಗಿದ್ದ ಹಾರೂನ್ ಸಯ್ಯದ್ ಅಹಮದ್ ಸೇರಿ ನಿಷೇಧಿತ ಮಾದಕ ವಸ್ತುವನ್ನು ಜೈಲಿನ ಒಳಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಅದೇ ಕಾರಾಗೃಹದಲ್ಲಿ ವಾಸವಾಗಿರುವ ಪ್ರಶಾಂತ ನಿಖಿಲ್ ಪವಾರ್ ಎಂಬ ಮತ್ತೊಬ್ಬ ಕೈದಿಯೂ ಕೈ ಜೋಡಿಸಿದ್ದಾರೆ.
ನಿಷೇಧಿತ ತಂಬಾಕು ಸಾಗಾಟ ಪ್ರಯತ್ನ ಕಾರಾಗೃಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಮದ್ ಮಂಜೂರ್ ಅಬ್ದುಲ್ ಕರೀಂ ಅವರ ಭೇಟಿಗೆ ಬಂದಿದ್ದ ಮೊಹಮದ್ ಅಲಿ ಅಬ್ದುಲ್ ಕರಿ ಹಾಗೂ ಅವರ ಜೊತೆಗಿದ್ದ ಹಾರೂನ್ ಸಯ್ಯದ್ ಅಹಮದ್ ಅವರು ಮೂರು ಸಣ್ಣ ಸಣ್ಣ ಚೀಟಿಯಲ್ಲಿ ತಂಬಾಕು ಕಟ್ಟಿಕೊಂಡು ಬಂದಿದ್ದರು. ಜೈಲು ವಾಸದಲ್ಲಿರುವವರ ಭೇಟಿ ಸಮಯದಲ್ಲಿ ಆ ವಸ್ತುವನ್ನು ಆರೋಪಿ ಮಹಮದ್ ಮಂಜೂರ್ ಅಬ್ದುಲ್ ಕರೀಂ ಅವರ ಕೈಗೆ ನೀಡಿದ್ದರು. ಈ ವೇಳೆ ಪ್ರಶಾಂತ ನಿಖಿಲ್ ಪವಾರ್ ಎಂಬ ಮತ್ತೊಬ್ಬ ಕೈದಿಗೆ ಆ ಮಾದಕ ವಸ್ತುಗಳು ಹಸ್ತಾಂತರವಾಗಿದ್ದು,
ಪ್ರಶಾಂತ ನಿಖಿಲ್ ಪವಾರ್ ಅವರು ಫೋನ್ ಮಾಡಲು ಜೈಲಿನ ಮುಖ್ಯದ್ವಾರಕ್ಕೆ ಆಗಮಿಸಿದ್ದರು.
ಮಾದಕ ವಸ್ತು ಹಸ್ತಾಂತರ ನಡೆಯುವುದನ್ನು ಸಿಸಿ ಕ್ಯಾಮರಾ ಮೂಲಕ ಪರಿಶೀಲಿಸುತ್ತಿದ್ದ ಜೈಲು ಸಿಬ್ಬಂದಿ ಶ್ರೀಧರ ಎಸ್ ಸನಗೌಡರ್ ಅವರು ಈ ವಿಷಯವನ್ನು ತಪಾಸಣಾ ಸಿಬ್ಬಂದಿಗೆ ತಿಳಿಸಿದರು. ಮುಖ್ಯಧ್ವಾರದ ಬಳಿ ಬಂದಿದ್ದ ಕೈದಿ ಪ್ರಶಾಂತ ನಿಖಿಲ್ ಪವಾರ್ ಅವರನ್ನು ಜೈಲಿನ ತಪಾಸಣಾ ಸಿಬ್ಬಂದಿ ಮಂಜುನಾಥ ಹಡಪದ ಅವರು ತಪಾಸಣೆ ನಡೆಸಿದರು. ಆಗ, ತಮ್ಮ ಬಳಿಯಿದ್ದ ಮೂರು ಚೀಟಿಗಳನ್ನು ಪ್ರಶಾಂತ ನಿಖಿಲ್ ಪವಾರ್ ಅವರು ಬಿಸಾಡಿದರು. ಅದನ್ನು ತೆರೆದು ನೋಡಿದಾಗ ಅಲ್ಲಿ ನಿಷೇಧಿತ ತಂಬಾಕುಗಳಿದ್ದವು. ಕಾರಾಗೃಹದ ಒಳಗೆ ಪ್ರವೇಶಿಸಿ ಹೊರ ಬಂದಿದ್ದ ತಂಬಾಕುಗಳನ್ನು ತಕ್ಷಣ ಜೈಲಿನ ಸಿಬ್ಬಂದಿ ಜಪ್ತು ಮಾಡಿದರು.
ಜೈಲಿನ ಒಳಗೆ ನಿಷೇಧಿತ ವಸ್ತು ಸಾಗಾಟ ಪ್ರಯತ್ನ ಮಾಡಿದ ಕೈದಿ ಮಹಮದ್ ಮಂಜೂರ್ ಅಬ್ದುಲ್ ಕರೀಂ, ಪ್ರಶಾಂತ ನಿಖಿಲ್ ಪವಾರ್ ಹಾಗೂ ಕೈದಿಗಳ ಸಂದರ್ಶನಕ್ಕೆ ಬಂದಿದ್ದ ಮೊಹಮದ್ ಅಲಿ ಅಬ್ದುಲ್ ಕರಿ ಹಾಗೂ ಹಾರೂನ್ ಸಯ್ಯದ್ ಅಹಮದ್ ವಿರುದ್ದ ಜೈಲಿನ ಸುಪ್ರೀಡೆಂಟ್ ಹೇಮಾವತಿ ಜಿ ಅವರು ಪೊಲೀಸ್ ದೂರು ನೀಡಿದರು. ಕಾರವಾರ ಶಹರ ಠಾಣೆ ಪೊಲೀಸರು ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.