ಜೊಯಿಡಾ ಕ್ಯಾಸಲರಾಕ್’ನ ಕೆಡಿಸಿಸಿ ಕೆಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಂಗಯ್ಯ ಕರಯ್ಯನವರ್ ಅವರು ತೆರಳುತ್ತಿದ್ದ ಬೈಕಿಗೆ ದಾಂಡೇಲಿ ಬಳಿ ಕಾರು ಗುದ್ದಿದೆ. ಈ ಅಪಘಾತದಲ್ಲಿ ಅದೇ ಬ್ಯಾಂಕಿನ ಉದ್ಯೋಗಿ ನಾಗೇಶ್ವರ ಚೌಹಾಣ್ ಅವರು ಗಾಯಗೊಂಡಿದ್ದಾರೆ.
ಸoಗಯ್ಯ ಕರಯ್ಯನವರ್ ಹಾಗೂ ನಾಗೇಶ್ವರ ಚೌಹಾಣ್ ಅವರು ಒಂದೇ ಬ್ಯಾಂಕಿನ ಉದ್ಯೋಗಿಯಾಗಿದ್ದು, ಅವರಿಬ್ಬರು ಹಳಿಯಾಳದವರಾಗಿದ್ದಾರೆ. ಮಾರ್ಚ 20ರಂದು ಬ್ಯಾಂಕಿಗೆ ರಜೆ ಇದ್ದ ಕಾರಣ ಅವರಿಬ್ಬರು ಒಟ್ಟಿಗೆ ಊರಿಗೆ ಹೋಗಿದ್ದರು. ಮಾರ್ಚ 23ರಂದು ಬ್ಯಾಂಕ್ ಕೆಲಸಕ್ಕಾಗಿ ಅವರು ಒಟ್ಟಿಗೆ ಊರಿನಿಂದ ಹೊರಟಿದ್ದರು. ಈ ವೇಳೆ ನಾಗೇಶ್ವರ ಚೌಹಾಣ್ ಅವರು ಬೈಕ್ ಓಡಿಸುತ್ತಿದ್ದು, ಸಂಗಯ್ಯ ಕರಯ್ಯನವರ್ ಅವರು ಸಹ ಸವಾರರಾಗಿದ್ದರು.
ದಾಂಡೇಲಿಯ ಸಿಂಗರಗಾವ್ ಮಾರ್ಗವಾಗಿ ಜಗಲಪೇಟೆ ಕಡೆ ಅವರಿಬ್ಬರು ಬೈಕಿನಲ್ಲಿ ಬರುವಾಗ ಎದುರಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆಯಿತು. ಈ ವೇಳೆ ನಾಗೇಶ್ವರ ಚೌಹಾಣ್ ಅವರು ನಿಧಾನವಾಗಿ ಬೈಕಿನ ಬ್ರೆಕ್ ಅದುಮಿದರು. ಅದಾಗಿಯೂ, ಡಿಕ್ಕಿ ರಭಸಕ್ಕೆ ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು. ಈ ಅಪಘಾತದಲ್ಲಿ ನಾಗೇಶ್ವರ ಚೌಹಾಣ್ ಅವರಿಗೆ ಗಾಯವಾಯಿತು. ಅಪಘಾತಕ್ಕೀಡಾದ ಕಾರಿನಲ್ಲಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮಾರ್ಚ ಎಂಡ್ ಗಡಿಬಿಡಿ ಕಾರಣ ಕೆಡಿಸಿಸಿ ಕೆಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಂಗಯ್ಯ ಕರಯ್ಯನವರ್ ಅವರು ಆ ದಿನ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಲಿಲ್ಲ. ತಮ್ಮ ಕಚೇರಿ ಕೆಲಸ ಮುಗಿದ ನಂತರ ಅವರು ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಹೆಸರು-ವಿಳಾಸ ಗೊತ್ತಿಲ್ಲದ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.