ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಭಾರತೀಯ ಮಜ್ದೂರ್ ಸಂಘದವರು ಎಲ್ಲಡೆ ಪ್ರತಿಭಟಿಸಿದ್ದಾರೆ. ಉತ್ತರ ಕನ್ನಡದಲ್ಲಿಯೂ ಈ ಪ್ರತಿಭಟನೆ ನಡೆದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲಾಗಿದೆ.
`ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಹಲವು ದಶಕದಿಂದ ಕೆಲಸ ಮಾಡುತ್ತಿದ್ದರೂ ಅವರ ಕೆಲಸ ಖಾಯಂ ಆಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅದರಿಂದ ಪ್ರಯೋಜನವಾಗಿಲ್ಲ’ ಎಂದು ಭಾರತೀಯ ಮಜ್ದೂರ್ ಸಂಘದವರು ದೂರಿದ್ದಾರೆ. `ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಸಿಬ್ಬಂದಿಯ ಮಾಸಿಕ ಗೌರವಧನ ಹೆಚ್ಚಿಸಬೇಕು. ಬ್ಯಾಂಕಿAಗ್ ಪದ್ಧತಿಯಲ್ಲಿ ವಾರಕ್ಕೆ 5 ದಿನ ಕೆಲಸದ ಪದ್ಧತಿ ಜಾರಿಯಾಗಬೇಕು. ರಾಜ್ಯದ ಆರೋಗ್ಯ ಇಲಾಖೆಯ ಒಳ ಮತ್ತು ಹೊರಗುತ್ತಿಗೆ ನೌಕರರಿಗೆ ಅವರ ಹುದ್ದೆ ಮಂಜೂರಾ ಪಡೆದು ಅವರ ಸೇವೆಯ ಆಧಾರದಮೇಲೆ ಆ ನೌಕರರನ್ನು ಖಾಯಂ ಮಾಡಬೇಕು. ಸರ್ಕಾರದ ಎಲ್ಲಾ ಇಲಾಖೆಯಲ್ಲಿರುವ ಒಳ ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೈಬಿಡಬೇಕು. ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ನೌಕರರ 38 ತಿಂಗಳ ಹೆಚ್ಚುವರಿ ಬಾಕಿ ವೇತನವನ್ನು ಪಾವತಿ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಮುಖ 15 ಬೇಡಿಕೆಗಳ ಪಟ್ಟಿಯನ್ನು ಅವರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ರವಾನಿಸಿದ್ದಾರೆ. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಗೋಕರ್ಣಕರ್, ನಾರಾಯಣ ಪಟಗಾರ, ಪ್ರಧಾನಿ ಕಾರ್ಯದರ್ಶಿಯಾದ ವಿಶ್ವನಾಥ್ ಎನ್ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಗಿದೆ.