ದಾಂಡೇಲಿಯಲ್ಲಿ ನಾಲ್ಕು ವರ್ಷದ ಮಗು ಕಾಣೆಯಾಗಿದ್ದು, ನೂರಕ್ಕೂ ಅಧಿಕ ಜನ ಓಣಿ ಓಣಿ ಸುತ್ತಾಡಿ ಮಗುವಿನ ಹುಡುಕಾಟ ನಡೆಸಿದ್ದಾರೆ. ಕೆಲ ಸಮಯದ ನಂತರ ಆ ಮಗು ಮನೆ ಮಹಡಿ ಮೇಲೆ ನಿದ್ರಿಸುತ್ತಿರುವುದು ಗೊತ್ತಾಗಿದೆ. ಮಗುವಿನ ರಕ್ಷಣೆಗಾಗಿ ದೇವರ ಮೊರೆ ಹೋಗಿದ್ದ ಕುಟುಂಬದವರು ನಿರಾಳರಾಗಿದ್ದಾರೆ.
ದಾಂಡೇಲಿ ಲಮಾಣಿ ಚಾಳದ ಜಾನ್ ರೆಮದ್ ಹೆಬ್ಬಳ್ಳಿ (ಹೆಸರು ಬದಲಿಸಿದೆ. ಕಾನೂನಾತ್ಮಕ ಕಾರಣದಿಂದ ಮಗುವಿನ ಮುಖ ಬಹಿರಂಗಪಡಿಸುತ್ತಿಲ್ಲ) ಅವರು ಶುಕ್ರವಾರ ಬೆಳಗ್ಗೆ ಸಂಬoಧಿಕರ ಮನೆಗೆ ಹೋಗುವುದಾಗಿ ಹೇಳಿದ್ದರು. 4 ವರ್ಷದ ಮಗುವನ್ನು ಕುಟುಂಬದವರು ಸ್ವತಂತ್ರವಾಗಿ ಬಿಟ್ಟಿದ್ದು, ಕೆಲ ಸಮಯದ ನಂತರ ಮಗು ಕಾಣಲಿಲ್ಲ. ಸಂಬoಧಿಕರ ಮನೆಯಲ್ಲಿ ವಿಚಾರಿಸಿದರೂ ಮಗು ಬಂದ ಬಗ್ಗೆ ಮಾಹಿತಿ ಇರಲಿಲ್ಲ. ಮಗು ಕಾಣೆಯಾದ ಸುದ್ದಿ ಎಲ್ಲಡೆ ಹರಡಿದ್ದು, ಇಡೀ ಕೇರಿಯವರು ಸೇರಿ ಹುಡುಕಾಟ ನಡೆಸಿದರು.
ಪೊಲೀಸರು ಸಹ ಮಗುವಿನ ಶೋಧ ಶುರು ಮಾಡಿದರು. ದಾಂಡೇಲಿ, ಹಳಿಯಾಳ, ಜೊಯಿಡಾ ಪೊಲೀಸರಿಗೂ ಮಾಹಿತಿ ನೀಡಿ ಮಗುವಿನ ಹುಡುಕಾಟ ನಡೆಯಿತು. ಈ ನಡುವೆ ಎಲ್ಲಾ ಧರ್ಮದವರು ಸೇರಿ ಮಗುವಿನ ರಕ್ಷಣೆಗಾಗಿ ದೇವರ ಮೊರೆ ಹೋದರು. ವಿವಿಧ ತಪಾಸಣಾ ಕೇಂದ್ರಗಳಲ್ಲಿಯೂ ಮಗುವಿಗಾಗಿ ಶೋಧ ನಡೆಯಿತು. ಸುಮಾರು ಐದು ಗಂಟೆಗಳ ಕಾಲ ಎಲ್ಲಡೆ ಆತಂಕ ಸೃಷ್ಠಿಯಾಗಿದ್ದು, ಮತ್ತೊಮ್ಮೆ ಮನೆ ಶೋಧಿಸಿದಾಗ ಆ ಮಗು ಮನೆಯ ಮಹಡಿ ಮೇಲೆ ಮಲಗಿರುವುದು ಗೊತ್ತಾಯಿತು. ಮಹಡಿ ಮೇಲಿದ್ದ ಮಗು ಗದ್ದಲ ಕೇಳಿ ಕೆಳಗಿಳಿದು ಬಂದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.