ಶಿರಸಿಯ ರಮೇಶ ನಿಲೇಕಣಿ ಅವರು ಅಡಿಕೆ ಮರ ಕಡಿಯುವಾಗ ಆ ಮರ ಅವರ ಮೈಮೇಲೆ ಬಿದ್ದಿದೆ. ಅಡಿಕೆ ಮರದ ಬುಡ ತಲೆಮೇಲೆ ತಿರುಗಿ ಬಿದ್ದ ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಶಿರಸಿ ತಾರಗೋಡಿನ ದಾಸನಗದ್ದೆ ಕೆರೆಕೊಪ್ಪದಲ್ಲಿ ರಮೇಶ ಸುಬ್ರಾಯ ನಿಲೇಕಣಿ ಅವರು ವಾಸವಾಗಿದ್ದರು. 62 ವರ್ಷದ ಅವರು ದಾಸನಕೊಪ್ಪದಲ್ಲಿ ಕೃಷಿ ಭೂಮಿ ಹೊಂದಿದ್ದರು. ಅಲ್ಲಿ ಅವರು ಅಡಿಕೆ ತೋಟ ನಿರ್ಮಿಸಿದ್ದರು. ನಿತ್ಯವೂ ಅವರು ಆ ತೋಟಕ್ಕೆ ಹೋಗಿ ಕೃಷಿ ಕೆಲಸ ಮಾಡುತ್ತಿದ್ದು, ಮಾರ್ಚ 26ರಂದು ಸಹ ಎಂದಿನAತೆ ತೋಟಕ್ಕೆ ಹೋಗಿದ್ದರು.
ಈ ದಿನ ಎಲ್ಲಾ ಅಡಿಕೆ ಮರದ ಚೆಂಡೆ ನೋಡುತ್ತ ಹೋದ ಅವರು ಚಂಡೆ ಒಣಗಿದ ಅಡಿಕೆ ಮರಗಳ ಕಟಾವಿಗೆ ನಿರ್ಧರಿಸಿದರು. ಬೆಳಗ್ಗೆ 11 ಗಂಟೆ ವೇಳೆಗೆ ಚೆಂಡೆ ಒಣಗಿದ ಅಡಿಕೆ ಮರವೊಂದನ್ನು ತುಂಡರಿಸಿದರು. ಆ ವೇಳೆ ಮುರಿದ ಅಡಿಕೆ ಮರ ಎದುರಿಗಿದ್ದ ಮತ್ತಿ ಮರಕ್ಕೆ ಸಿಕ್ಕಿ ಬಿದ್ದಿತು. ಆ ವೇಳೆ ಅಡಿಕೆ ಮರದ ಬುಡ ಒಮ್ಮೆಲೆ ಆಕಾಶದ ಕಡೆ ಹಾರಿದ್ದು, ಜೋರಾಗಿ ನೆಲಕ್ಕೆ ಅಪ್ಪಳಿಸಿತು. ನೆಲಕ್ಕೆ ಅಪ್ಪಳಿಸುವ ಪೂರ್ವದಲ್ಲಿ ಅಲ್ಲಿಯೇ ನಿಂತಿದ್ದ ರಮೇಶ ನಿಲೇಕಣಿ ಅವರ ತಲೆಗೆ ಆ ಬುಡ ಬಡಿಯಿತು.
ಕ್ಷಣ ಮಾತ್ರದಲ್ಲಿ ನಡೆದ ಈ ಅನಾಹುತದಿಂದ ರಮೇಶ ನಿಲೇಕಣಿ ಅವರು ಅಲ್ಲಿಯೇ ಕುಸಿದು ಬಿದ್ದರು. ಕುಟುಂಬದವರು ಬಂದು ನೋಡುವಷ್ಟರಲ್ಲಿ ಅವರು ಸಾವನಪ್ಪಿದ್ದರು. ಪತಿಯ ಸಾವಿನ ಬಗ್ಗೆ ಅಂಬಿಕಾ ರಮೇಶ ನಿಲೇಕಣಿ ಅವರು ಮಾಹಿತಿ ನೀಡಿದರು. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿದರು.